“ಪರಿಪೂರ್ಣ ಶಾಂತಿ ಲಭಿಸುವುದು ಏಕಾಂತವಾಸದಲ್ಲಿ ಮಾತ್ರ.ಬಹುಜನರಿದ್ದರೆ ಒಮ್ಮೆ ಪ್ರೀತಿಯ ನಿನಾದ:ಇನ್ನೊಮ್ಮೆ ದ್ವೇಶದ ಆಸ್ಫೋಟ.ಒಂದೆಡೆ ಕರುಣೆಯ ವೀಣೆ ಮಿಡಿದರೆ,ಇನ್ನೊಂದೆಡೆ ಹೃದಯ ಭೇದಿಸುವ ಕ್ರೌರ್ಯದ ತಮಟೆ.ಅಂತರಂಗ ವಿಹಾರಿಗಳಾದ ಮಹರ್ಷಿಗಳು ಶಾಂತಿಯನ್ನು ಅರಸಿದ್ದು ಹೃದಯಾಲಯದಲ್ಲಿ.ಅದನ್ನು ಪ್ರತಿನಿಧಿಸುವ ಗಿರಿ-ಗುಹೆ-ಗಹ್ವರಗಳಲ್ಲಿ.ಶಾಂತಿಯಿರುವುದು ಬೆಳ್ಳಿಯ ಮಾತಿನಲ್ಲಲ್ಲ:ಬಂಗಾರದ ಮೌನದಲ್ಲಿ.ಓ ಮೌನವೇ ! ನೀ ಶಾಂತಿಯ ಬಯಸುವೆಯಾದರೆ ಲೋಕಾಂತರದ ದೊಂಬರಾಟವ ಬಿಟ್ಟು ಅಂತರಂಗದಲ್ಲೇರ್ಪಡುವ ಏಕಾಂತದ ಮೌನಕ್ಕೆ ಶರಣಾಗು.”
ಗುರುವಾಣಿ
ಶ್ರೀ ಸಂಸ್ಥಾನ ಗೋಕರ್ಣ, ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು ತಮ್ಮ ಶಿಷ್ಯವೃಂದಕ್ಕೆ ಹರಸುವ ಆಶೀರ್ವಚನಗಳು.
“ಸ್ವರ್ಗ-ನರಕಗಳು ಮಾನವನ ಜೀವನಮಾರ್ಗವನ್ನು ನಿರ್ದೇಶಿಸುತ್ತಿವೆ.ನರಕದ ಭೀತಿ ಮನುಷ್ಯ ಪಾಪಕರ್ಮಕ್ಕೆ ಇಳಿಯುವುದನ್ನು ತಪ್ಪಿಸಿದರೆ,ಸ್ವರ್ಗದ ಅಭಿಲಾಷೆ ಸತ್ಕರ್ಮದೆಡೆಗೆ ಮನಸ್ಸನ್ನು ಪ್ರೇರೇಪಿಸುತ್ತದೆ.ಮನುಷ್ಯ ಸಹಜವಾದ ಆಸೆ-ಭೀತಿಗಳನ್ನು ನಮ್ಮ ಪೂರ್ವಜರು ಮಾನವನ ಒಳಿತಿಗೆ ಉಪಯೋಗಿಸಿದರು.ಎಳವೆಯ ಸುಬೋಧೆ ಪಶುವಿನಂತಹ ಶಿಶುವನ್ನು ಮಾನವನನ್ನಾಗಿ ಮಾಡುತ್ತದೆ.ಮಾನವನನ್ನು ದಾನವನಾಗಬಿಡದೇ ಮಾಧವನನ್ನಾಗಿಸುತ್ತದೆ.”
ಗೋಹತ್ಯೆಯಂತಹ ಮಹಾಪಾತಕ ನಡೆಯುತ್ತಿರುವ ಅಖಂಡ ಭೂಮಂಡಲವಿಂದು ಸೂತಕದ ಮನೆಯಾಗಿದೆ.ನಾವು ಮಾಡುತ್ತಿರುವ ಪಾಪದ ಕೊಳೆಯನ್ನು ತೊಳೆಯಲು ವರ್ಷಾನುಗಟ್ಟಲೆ ಮಳೆ ಮುಸಲಧಾರೆಯಾಗಿ ಸುರಿದರೂ ಸಾಲದೆಂತೆನಿಸುತ್ತದೆ.ತನ್ನ ಅಮೃತಮಯವಾದ ಹಾಲಿನಿಂದ ಜನರ ಒಡಲನ್ನು ತಂಪಾಗಿಸಿದವಳು ಆಕೆ.ದುರಂತವೆಂದರೆ ಇಂದು ಆಕೆಯ ಒಡಲನ್ನೇ ಹರಿಯಲು ಮುಂದಾಗಿದ್ದೇವೆ.ಈ ಪಾತಕವನ್ನು ದೈವ ಎಂದೂ ಕ್ಷಮಿಸದು.
ಒಬ್ಬ ವಿಜ್ನಾನಿಯ ದೃಷ್ಟಿಯಿಂದ ಚಂದ್ರ ವೃದ್ಧಿಸುವುದೂ ಇಲ್ಲ,ಕ್ಷಯಿಸುವುದೂ ಇಲ್ಲ.ಸೂರ್ಯ-ಚಂದ್ರರ ಸ್ಥಿತಿಗತಿಗಳ ತಾರತಮ್ಯದಿಂದಾಗಿ ವೃದ್ಧಿಸಿದಂತೆ-ಕ್ಷಯಿಸಿದಂತೆ ತೋರುತ್ತಾನೆ.ಭೂಮಿಯ ಆಕರ್ಷಣೆಯನ್ನು ಮೀರಿ ಬಾಹ್ಯಾಕಾಶದಲ್ಲಿ ನಿಂತು ನೋಡಿದರೆ ಚಂದ್ರ ಸದಾ ಏಕರೂಪವಾಗಿಯೇ ಇರುವುದು ಅರಿವಾಗುತ್ತದೆ.ಭೌತಿಕ ಆಕರ್ಷಣೆಗಳನ್ನು ಮೀರಿ ಹೃದಯಾಕಾಶದಲ್ಲಿ ನಿಂತು ನೋಡುವ ಜ್ನಾನಿ,ಹುಟ್ಟು-ಬೆಳವಣಿಗೆ -ಸಾವುಗಳಿಲ್ಲದೇ ಆತ್ಮ ಸದಾ ಏಕರೂಪವಾಗಿಯೇ ಇರುವುದನ್ನು ಅರಿಯುತ್ತಾನೆ.
ಸಂನ್ಯಾಸ
ಸಂನ್ಯಾಸವೆಂದರೆ ಜೀವನವನ್ನೇ ಜನಾರ್ದನನಿಗೆ ಸಮರ್ಪಿಸುವುದಾಗಿದೆ.ವ್ಯಕ್ತಿಯಲ್ಲಿ ತಾನೆಂಬ ಸ್ವಾರ್ಥವಿರಬಹುದು.ಆದರೆ ಸಂನ್ಯಾಸಿಯಲ್ಲಿ ಜಗವನ್ನೇ ತನ್ನದೆಂದು ಭಾವಿಸುವ ವಿಶಾಲ ಹೃದಯವಿದೆ.ಸಂಗ್ರಹವೇ ಸಂಸಾರ.ತ್ಯಾಗವೇ ಸಂನ್ಯಾಸ.ಪ್ರಪಂಚದಲ್ಲಿ ಗುರುಪೀಠ ಇರುವವರೆಗೆ ಯಾರೂ ಅನಾಥರಾಗಲು ಸಾಧ್ಯವಿಲ್ಲ.ತ್ಯಾಗದಲ್ಲಿ ಸುಖವಿದೆಯೆಂಬ ದಿವ್ಯ ಸಂದೇಶ ಸಾರುವ ಆಶ್ರಮವೆಂದರೆ ಸಂನ್ಯಾಸ.
ಶಿಕ್ಷಣ
ಇಂದಿನ ಶಿಕ್ಷಣ ‘ಚಿತ್ತು ಕಾಟಿ’ನ ಶಿಕ್ಷಣವಾಗಿದೆ. ಆದರೆ ಇದು ಚಿತ್ತಾರದ ಶಿಕ್ಷಣವಾಗಬೇಕು., ನಾವು ತೆಂಗಿನಕಾಯಿಯಂತೆ ಹೊರಗೆ ಕಂದಾಗಿ ಒಳಗೆ ಬಿಳಿಯರಂತೆ ಬ್ರಿಟಿಷ್ ಶಿಕ್ಷಣ ಪಡೆಯುತ್ತಿದ್ದೇವೆ. ಇದನ್ನು ತಡೆಯದಿದ್ದರೆ ನಮ್ಮ ಸಂಸ್ಕೃತಿ ನಾಶವಾಗುತ್ತದೆ. ಬೀಜಕ್ಕೆ ನೀರು ಗೊಬ್ಬರ ಮಣ್ಣು ಸರಿಯಾಗಿ ಸಿಕ್ಕರೆ ಚೆನ್ನಾಗಿ ಹೆಮ್ಮರವಾಗಿ ಬೆಳೆಯುವಂತೆ, ಇಂದಿನ ಮಕ್ಕಳಿಗೆ ಸರಿಯಾದ ಪರಿಸರ, ಶಿಕ್ಷಣ ಜ್ಞಾನ ದೊರೆತರೆ ಮಾತ್ರ, ಸಂಸ್ಕೃತಿಯ ಹರಿಕಾರರಾಗಿ ಬೆಳೆಯಲು ಮತ್ತು, ಬೆಳಗಲು ಸಾಧ್ಯವಿದೆ.
- ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳು
ಜ್ಞಾನ ನೇತ್ರ
ತ್ರ್ಯಂಬಕ – ಎಂದರೆ ಮುಕ್ಕಣ್ಣ. ಅವನ ಸ್ಥಾನ ಆಜ್ಞಾ ಚಕ್ರ. ಇದು ಕರ್ಮ ಮತ್ತು ಜ್ಞಾನಗಳು ಸೇರುವ ಸಂಧಿಯ ಸ್ಥಾನವಾಗಿದೆ. ಶಿವನ ಮೂರನೇ ಕಣ್ಣು ಎಲ್ಲ ಇಂದ್ರಿಯಗಳಿಗಿಂತ ಮೇಲೆ ಮಹಾ ಮಸ್ತಿಷ್ಕದ ಹತ್ತಿರವಿದೆ. ಅಜ್ಞಾನ ನಾಶಮಾಡಿ ಜ್ಞಾನ ನೀಡುವ ಕಣ್ಣೇ ಜ್ಞಾನ ನೇತ್ರ. ಈ ಸಂಧಿಯ ಸ್ಥಾನಕ್ಕಿಂತ ಮೇಲೆ ಕೇವಲ ಜ್ಞಾನ ಮಾತ್ರ ಲಭ್ಯ. ಕರ್ಮ ಬಂದ್ಥನ ನಿವೃತ್ತವಾಗಿ ಜ್ನಾನದೆಡೆಗೆ ಸಾಗುವಂತೆ ಸಂದೇಶ ನೀಡಬಲ್ಲುದು. ಈ ಹಿನ್ನೆಲೆಯಲ್ಲಿ ಜ್ಞಾನವನ್ನು ಮಹೇಶ್ವರನಿಂದ ಇಚ್ಚಿಸಬೇಕೆಂದು ಮಹರ್ಷಿಗಳು ಸಾರಿದ್ದರು.
- ಶ್ರೀ ಶ್ರೀ [...]
ವಿಮರ್ಶೆ – ಅವಲೋಕನ
ಇಂದು ಲೋಕದಲ್ಲಿ ವಿಮರ್ಶೆ ಮಾಡುವವರು ಬಹಳ ಮಂದಿ ಇದ್ದಾರೆ. ಆದರೆ ಆತ್ಮಾವಲೋಕನ ಮಾಡಿಕೊಳ್ಳುವವರು ಇಲ್ಲವಾಗಿದ್ದಾರೆ. ಸೃಷ್ಟಿಯ ನೋಟಕ್ಕೆ ನಮ್ಮ ದೃಷ್ಟಿಯನ್ನು ಸೇರಿಸಿಕೊಂಡು ನೋಡಬೇಕು. ಆಗ ಅದು ಸಮೀಕ್ಷಣವಾಗುವುದು. ದೃಷ್ಟಿದೋಷದಿಂದ ನೋಡಿದರೆ ಸೃಷ್ಟಿಯೇ ತಪ್ಪಾಗಿ ಕಾಣುವುದು. ಅದು ವ್ಯಕ್ತಿಗತದೋಷ.ಅದೇ ರೀತಿ ಬುದ್ಡಿಮಾಲಿನ್ಯದಿಂದ ವಿಷಯ ವಿಮರ್ಶೆ ಜರುಗಿದರೆ ಸತ್ಯ ಪ್ರಕಾಶವಾಗುವುದು. ಕವಿ ಹೃದಯಕ್ಕೆ ಸತ್ಯ ದೃಷ್ಟಿಯ ವಿಮರ್ಶೆ ಜರುಗಲಿ.
|| ಹರೇ ರಾಮ ||
- ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಗಳು
ಶರಣಾಗತಿ
- ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು, ಶ್ರೀ ಸಂಸ್ಥಾನ, ಗೋಕರ್ಣ
ಶರಣಾಗತಿಗೆ ಅದ್ಭುತ ಶಕ್ತಿ ಇದೆ. ಹನುಮಂತ ಶ್ರೀರಾಮನಲ್ಲಿ ಶರಣಾಗತನಾಗಿ ಅಮರನಾದ. ವಿಭೀಷಣ ಶರಣಾಗಿ ಬಂದು ಲಂಕೆಯಲ್ಲಿ ಸತ್ಯರಾಜ್ಯ ಸ್ಥಾಪಿಸಿದ. ಅಂತೆಯೇ ಭಕ್ತ ದೇವನಲ್ಲಿ ಶರಣಾಗತನಾಗಿ ಭವದ ಬಂಧನವನ್ನೇ ಕಳಚಿಕೊಳ್ಳಬಲ್ಲ. ಶರನಾಗತಿಯೆಂದರೆ ಗುರು – ಶಿಷ್ಯ; ಜೀವ -ದೇವ; ಪ್ರಕೃತಿ-ಪುರುಷರ ಸಂಗಮದ ವ್ಯಾಪಾರ.
|| ಹರೇ ರಾಮ ||
ಸಂತರ ಜೀವನ
- ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು, ಶ್ರೀ ಸಂಸ್ಥಾನ, ಗೋಕರ್ಣ
ಸತ್ಯದ ಹಾದಿ ಸದಾ ದುರ್ಗಮ. ಅದು ನಿರಂತರ ಎಕಾಂಗಿತನದಿಂದ ಕೂಡಿದೆ. ಕಾಣುವ ಪ್ರಪಂಚದ ಭೋಗಗಳನ್ನು ಬಿಟ್ಟು ಕಾಣದ ಭಗವಂತನ ಹಿಂದೆ ಓಡುವ ಸಂತರ ಜೀವನ ಜನರ ಕಣ್ಣಿಗೆ ವಿಲಕ್ಷಣವಾಗಿ ಕಾಣುವುದು. ಎಲ್ಲ ಸುಖ – ದುಃಖಗಳ ತಾಯಿಯೆನಿಸಿದ, ತಮ್ಮಲ್ಲೇ ಹುದುಗಿರುವ ಪರಮಾತ್ಮ ಸುಖವನ್ನು ಬಿಟ್ಟು ಹೊರಗಿನ ವಿಷಯ ಸುಖಗಳಿಗಾಗಿ ಹಾತೊರೆಯುವ ಜಗತ್ತು ಜ್ಞಾನಿಗಳ ಕಣ್ಣಿಗೆ ಹುಚ್ಚಾಗಿ ತೋರುವುದು. ವಿಷಯ ಸುಖದ ಪೊರೆಯನ್ನು ಕಳಚಿ ಅಂತರಂಗದ ಆನಂದದಲ್ಲೇ [...]