ಮೇ.16 – ಕೋಟಿ ರುದ್ರ ಜಪಾನುಷ್ಠಾನಕ್ಕೆ ಸಾಮಾಜಿಕ ಆಯಾಮ – ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು
..................................................................................................................................................
ಗೋಕರ್ಣ:- ವಿಶ್ವದಲ್ಲಿ ಮೊಟ್ಟ ಮೊದಲ ಬಾರಿಗೆ ಶ್ರೀಮಹಾಬಲೇಶ್ವರ ಮಂದಿರದಲ್ಲಿ ಕಳೆದ ವರ್ಷದಿಂದ ಆರಂಭಿಸಲಾದ ಕೋಟಿರುದ್ರ ಜಪಾನುಷ್ಠಾನಕ್ಕೆ ನಾಡಿನಾದ್ಯಂತ ಉತ್ತಮ ಪೋಷಣೆ ಒದಗಿ ಬಂದಿದ್ದು, ಕಾರಣ ಇದಕ್ಕೆ ಒಂದು ಸಾಮಾಜಿಕ ಆಯಾಮ ನೀಡುವತ್ತ ಸಂಕಲ್ಪಿಸಲಾಗಿದೆ ಎಂದು ನುಡಿದರು. ಇಲ್ಲಿನ ಶ್ರೀಮಹಾಬಲೇಶ್ವರ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೋಟಿರುದ್ರ ಜಪಾನುಷ್ಠಾನದ ಪಂಚಮ ಪರ್ವದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡುತ್ತಿದ್ದರು. ವಿಶ್ವಕಲ್ಯಾಣಕ್ಕಾಗಿ ಸಂಘಟಿಸಲಾದ ಕೋಟಿರುದ್ರ ಜಪಾನುಷ್ಠಾನ ಶ್ರೀಮಂದಿರಕ್ಕೆ ಮಾತ್ರ ಸೀಮಿತವಾಗಿರಬಾರದು. ಈ ಅನುಷ್ಠಾನದ ಮೂಲಕ ಸಾಮಾಜಿಕ ಕಾರ್ಯ ಕೂಡಾ ಸಾಧಿಸುವಂತಾಗಬೇಕು. ಈ ಹಿನ್ನೆಲೆಯಲ್ಲಿ ಒಂದು ರುದ್ರ ಸೇವೆ ಕೈಗೊಂಡವರಿಗೆ ಒಂದು ಬಿಲ್ವಪತ್ರೆ ಸಸಿಯನ್ನು ಶ್ರೀದೇವರಿಗೆ ಅರ್ಪಿಸಿ ನೀಡಲಾಗುವುಗದು. ಅವುಗಳನ್ನು ಅವರವರ ಸ್ವಸ್ಥಾನಗಳಲ್ಲಿ ನೆಟ್ಟು ಪೋಷಿಸುವಂತೆಯೂ ಗಮನಹರಿಸಲಾಗುವುದು. ಈ ರೀತಿ ಪ್ರತಿ ಗ್ರಾಮ, ತಾಲ್ಲೂಕು, ಜಿಲ್ಲೆಗಳಲ್ಲಿ ಒಂದೊಂದು ಬಿಲ್ವಪತ್ರೆ ವನ ನಿರ್ಮಾಣದ ಗುರಿ ಈ ಸಮಿತಿಗಿದೆ ಎಂದು ಶ್ರೀಗಳು ವಿವರಿಸಿದರು. ಇದಕ್ಕೆ ಎಲ್ಲರೂ ಸಹಕಾರ ಒದಗಿಸುವಂತೆ ಅವರು ಕೇಳಿಕೊಂಡರು. ಒಂದು ವರ್ಷದ ಕಾಲಾವಧಿಯಲ್ಲಿ ಹನ್ನೊಂದು ಲಕ್ಷಕ್ಕೂ ಅಧಿಕ ರುದ್ರ ಪಠಣವನ್ನು ಶ್ರೀಮಹಾಬಲೇಶ್ವರ ಮಂದಿರದಲ್ಲಿ ಕೈಗೊಂಡು ವಿನೂತನವಾದ ವಿಶ್ವ ವಿಕ್ರಮವೊಂದನ್ನು ಸ್ಥಾಪಿಸಲು ಕಾರಣರಾದ ಎಲ್ಲರನ್ನೂ ಶ್ರೀಗಳು ಅಭಿನಂದಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೇಂದ್ರದ ಮಾಜಿ ಸಚಿವ ಧನಂಜಯ ಕುಮಾರ್ ಮಾತನಾಡುತ್ತ ವಿಶ್ವದಲ್ಲಿ ಎಷ್ಟೋ ವಿಸ್ಮಯಗಳ ಕುರಿತು ಭಾರತೀಯ ವೇದಗಳು ಮಾತ್ರ ಉತ್ತರವನ್ನು ಹೊಂದಿವೆ. ವಿಜ್ಞಾನ ಕೂಡ ತಲುಪಲಾಗದ ಹಂತವನ್ನು ನಮ್ಮ ಸನಾತನ ಋಷಿ ಮುನಿಗಳು ಹೊಂದಿದ್ದರು. ಇದರಿಂದಾಗಿಯೇ ಭಾರತ ದೇಶಕ್ಕೆ ಇಂದಿಗೂ ವಿಶ್ವಮನ್ನಣೆ ಲಭ್ಯವಾಗಿದೆಯಾಗಿ ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಮಾತನಾಡಿದ ಭಟ್ಕಳ ಶಾಸಕ ಜೆ. ಡಿ. ನಾಯ್ಕ ಈ ತನಕ ರಾಜ್ಯದಲ್ಲಿ ಎಲ್ಲ ಪಕ್ಷಗಳ ಸರಕಾರವನ್ನು ಕಂಡಿದೆ. ಈ ಎಲ್ಲ ಪಕ್ಷದ ಪ್ರಮುಖರೂ ಗೋಕರ್ಣದ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ. ಆದರೆ ಗೋಕರ್ಣ ಕ್ಷೇತ್ರಕ್ಕೆ ಹಾಗೂ ಇಲ್ಲಿನ ಪ್ರವಾಸೋದ್ಯಮಕ್ಕೆ ಆಗಬೇಕಾದ ಕೆಲಸ ಇನ್ನೂ ಬಹಳ ಬಾಕಿ ಇದೆಯಾಗಿ ಅವರು ತಿಳಿಸಿದರು. ಇದಕ್ಕೆ ರಾಜ್ಯ ಸರಕಾರದ ವಿಶೇಷ ಪ್ರತಿನಿಧಿಯಾದ ಧನಂಜಯ ಕುಮಾರ್‌ರವರು ರಾಜ್ಯ ಸರಕಾರದ ಮೂಲಕ ಸಹಕರಿಸಿ ಉಪಕರಿಸುವಂತೆ ವಿನಂತಿಸಿದರು. ಹಿರಿಯ ಉದ್ಯಮಿ ಪ್ರಕಾಶ ಗಾಂವಕರ ಮಾತನಾಡಿ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯ ನೇತೃತ್ವದಿಂದಾಗಿ ಸಮಸ್ತ ಗೋಕರ್ಣ ಹಾಗೂ ಶ್ರೀಮಂದಿರ ಹಿಂದೆಂದೂ ಕಂಡರಿಯದ ಅಭಿವೃದ್ಧಿ ಕಾಣುವ ಯೋಗ ಪಡೆಯುವಂತಾಗಿದೆ. ಶ್ರೀಗಳ ಪ್ರಯತ್ನದಿಂದಾಗಿ ಈ ತನಕ ಮಂದಿರದಿಂದ ದೂರ ಇಟ್ಟಿದ್ದ ವಿವಿಧ ಸಮಾಜ ಬಾಂಧವರು ಮತ್ತೆ ಒಂದೆಡೆ ಸೇರಿ ಸೇವೆ ಸಲ್ಲಿಸುವಂತಾಗಿದೆಯಾಗಿ ತಿಳಿಸಿದರು. ಪಂಚಮ ಪರ್ವ ಸಮಾರಂಭದ ಹಿನ್ನೆಲೆಯಲ್ಲಿ ನಾಡಿನ ಹಿರಿಯ ವೇದ ವಿದ್ವಾಂಸರಾದ ವೇದ ಬ್ರಹ್ಮ ನಾರಾಯಣ ಶಾಸ್ತ್ರಿ ಬುಚ್ಚನ್ ಕರ್ಕಿ ಹಾಗೂ ಕಾವ್ಯಕೋವಿದ ಡಾ|| ವೇಣಿ ಮಾಧವ ಬಿ. ಶಾಸ್ತ್ರಿ ಧಾರವಾಡ ಇವರನ್ನು ಶಾಲು ಹೊದಿಸಿ, ಸನ್ಮಾನ ಪತ್ರ ನೀಡಿ ಶ್ರೀಗಳು ಗೌರವಿಸಿದರು. ರುದ್ರ ಪಠಣದ ಮಹತ್ವವನ್ನು ಸನ್ಮಾನಿತರುಗಳು ಸಭೆಗೆ ವರ್ಣಿಸಿದರು. ಆರಂಭದಲ್ಲಿ ಸಮಿತಿಯ ರಾಜಶೇಖರ ಹೆಬ್ಬಾರ್ ಸಭಾಪೂಜೆ ಮೂಲಕ ಸ್ವಾಗತಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ ಅತ್ರಿಜಾಲ ಹಾಗೂ ಕುಮಾರ ಸಂಪಕಟ್ಟೆ ನಿರ್ವಹಿಸಿದರು. ಕೋಟಿರುದ್ರ ಸಮಿತಿ ಅಧ್ಯಕ್ಷ ಶಿತಿಕಂಠ ಹಿರೇ ಭಟ್ಟ ಅಭ್ಯಾಗತರನ್ನು ಗೌರವಿಸಿದರು. ಕಾರ್ಯಾಲಯದ ಕಾರ್ಯದರ್ಶಿ ಜಿ. ಕೆ. ಹೆಗಡೆ ಗೋಳಗೋಡ ಅವಲೋಕನದ ಮೂಲಕ ಅಭಿನಂದಿಸಿದರು.
Leave a Reply