ಮುಖಪುಟ >> News, Recent, ಸುದ್ದಿಪುಟ

ಸಂಸ್ಕೃತ ಭಾರತೀಯಸಂಸ್ಕೃತಿಯ ಪ್ರತಿಬಿಂಬ-ಶಿಕ್ಷಣಸಚಿವ ಶ್ರೀಕಾಗೇರಿ.

..................................................................................................................................................

ಗೋಕರ್ಣ.15. ಭಾಷೆ ಕೇವಲ ಭಾವನೆಗಳ ಅಭಿವ್ಯಕ್ತಿ, ಅಥವಾ ವ್ಯವಹಾರ ವಿಷಯಗಳಿಗೆ ಮಾತ್ರ ಸೀಮಿತವಲ್ಲ. ಅದು ನಮ್ಮ ಬದುಕನ್ನು ರೂಪಿಸಿ ಸುಸಂಸ್ಕೃತವನ್ನಾಗಿ ಮಾಡುವ ಉತ್ಕೃಷ್ಟ ಸಾಧನವೂ ಹೌದು. ಈ ಹಿನ್ನಲೆಯಲ್ಲಿ ನಮ್ಮ ಜೀವನದ ಅವಿಭಾಜ್ಯ ಅಂಗವಾದ ಸಂಸ್ಕೃತ ಭಾರತೀಯ ಸಂಸ್ಕೃತಿಯ ಪ್ರತಿಬಿಂಬವೂ ಆಗಿದೆ ಎಂದು ರಾಜ್ಯದ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣಸಚಿವ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅಭಿಪ್ರಾಯಪಟ್ಟಿದ್ದಾರೆ. ರವಿವಾರ ಸಂಜೆ ಗೋಕರ್ಣದ ಸಾಗರತೀರದ ಮಹರ್ಷಿ ದೈವರಾತ ವೇದಿಕೆಯಲ್ಲಿ ನಡೆಯುತ್ತಿರುವ ಅಖಿಲ ಕರ್ಣಾಟಕ ಸಂಸ್ಕೃತ ಪರಿಷತ್ತಿನ ಆರನೆಯ ರಾಜ್ಯಸ್ತರದ ಸಂಸ್ಕೃತ ಸಮ್ಮೇಳನದ ದ್ವಿತೀಯ ಗೋಷ್ಠ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ಶ್ರೀ ಕಾಗೇರಿ ನಮ್ಮ ಸರಕಾರ ಸಂಸ್ಕೃತಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಿದೆ. ಆದರೆ ಈ ವಿಷಯಕ್ಕೆ ಸಂಬಂಧಸಿದಂತೆ ಮಾಹಿತಿಗಳ ಕೊರತೆಯಿದೆ. ಸಂಸ್ಕೃತಜ್ಙರು ಈ ವಿಷಯದಲ್ಲಿ ಸಮಗ್ರ ಮಾಹಿತಿಯನ್ನು ನೀಡಿದರೆ ಒಂದು ಸಮಿತಿಯನ್ನು ನೇಮಿಸಿ ವರದಿ ಪಡೆದು ತನ್ಮೂಲಕ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿ ಈ ಸಮ್ಮೇಳನದಲ್ಲಿ ನಡೆಯಲಿರುವ ಎಲ್ಲ ಗೋಷ್ಠಿಗಳ ಸಾರಾಂಶವನ್ನೂ ಸೇರಿದಂತೆ ಸ್ವೀಕರಿಸಿದ ನಿರ್ಣಯಗಳನ್ನು ಮನವಿ ರೂಪದಲ್ಲಿ ಸರಕಾರಕ್ಕೆ ನೀಡಿ ಎಂದರು. ಇದೊಂದು ಸಾಮಾಜಿಕ ಜಾಗೃತಿಯ ಕಾರ್ಯವಾಗಿದ್ದು ಸಂಸ್ಕೃತವನ್ನು ಜನಸಾಮಾನ್ಯರ ಬಳಿಗೆ ಒಯ್ಯಬೇಕಾಗಿದೆ, ಈ ಕಾರ್ಯದಲ್ಲಿ ಸಂಸ್ಕೃತಜ್ಙರ ಜವಾಬ್ದಾರಿ ಹೆಚ್ಚಿನದಾಗಿದೆ. ರಾಷ್ಟ್ರೀಯತೆಗೆ ಭಂಗ ಬರುವಂತಹ ಸಂದರ್ಭ ಎದುರಾದಾಗ ಸಂಸ್ಕೃತಜ್ಙರು ತೀಕ್ಷ್ಣವಾಗಿ ಪ್ರತಿಕ್ರಯಿಸಬೇಕಾದ ಅಗತ್ಯವೂ ಇದೆ ಎಂದು ಸಚಿವರು ಅಭಿಪ್ರಾಯಪಟ್ಟರು. ಪರಿಷದಧ್ಯಕ್ಷ ಡಾ.ವ.ಕೆ.ಹಂಪಿಹೊಳಿ ಸ್ವಾಗತಿಸಿದರು. ಡಾ.ಪದ್ಮನಾಭ ಮರಾಠೆ ಧನ್ಯವಾದ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಸ್ಕೃತಕ್ಷೇತ್ರದ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು,ಮತ್ತು ಸಂಸ್ಕೃತ ವಿದ್ಯಾರ್ಥಿ-ಶಿಕ್ಷಕ ಸಂಬಂಧಗಳು ಎಂಬ ವಿಷಯದ ಮೇಲೆ ಗೋಷ್ಠಿಗಳು ಹಾಗೂ ವೇ||ಕೇಶವ ಜೋಗಳೇಕರ ಅಧ್ಕಕ್ಷತೆಯಲ್ಲಿ ವೇದ ಸಭೆಗಳು ನಡೆದವು. ವಿ||ರಾಮನಾಥ ಆಚಾರ್ಯರಿಂದ ವಿಚಾರಧಾರೆ ಶ್ರೀಮತಿ ಲಲಿತಾ ಹಿರೇಗಂಗೆಯವರಿಂದ ಹಿಂದೂಸ್ತಾನಿ ಶಾಸ್ತ್ರೀಯಸಂಗೀತ, ಭರತನಾಟ್ಯ ಪ್ರೊ||ಎಸ್.ಶಂಭು ಭಟ್ಟ,ಕಡತೋಕ ಇವರಿಂದ ಬಾನ್ಸುರಿವಾದನ ರಾಜೇಶ್ವರಿ ಕಲಾನಿಕೇತನದವರಿಂದ ನೃತ್ಯರೂಪಕ ಮತ್ತು ಮೂರೂರಿನ ಹಾಲಕ್ಕಿ ಒಕ್ಕಲಿಗರ ಬಳಗದಿಂದ ವೀರಗಾಸೆ ಕಾರ್ಯಕ್ರಮಗಳು ಆಯೋಜಿತವಾಗಿದ್ದವು.

---------------------------------------------------------------------------------------------------------------------------------------------------------------------------------------

Leave a Reply