ಅರಿವಿಲ್ಲದವರ ಪಾಲಿಗೆ ಸಂಸ್ಕೃತ ಮೃತಭಾಷೆ- ಶ್ರೀಶ್ರೀಮದ್ರಾಘವೇಶ್ವರ ಭಾರತೀ ಶ್ರೀ.
..................................................................................................................................................
ಗೋಕರ್ಣ.14. ಭಾಷೆಯೊಂದಿಗೆ ಸಂಸ್ಕಾರವನ್ನೂ ಬೆಳೆಸುವ ಭಾಷೆಯೊಂದಿದ್ದರೆ ಅದು ಸಂಸ್ಕೃತ. ಮೂಲತಃ ಸಂಸ್ಕಾರವಾಚಿಯಾದ ಈ ಶಬ್ದ ಜೀವಭಾವದ ಪೂರ್ಣಶೋಧನೆಯಾಗಿ ದೇವಭಾವ ಮೂಡಿದ ಅವಸ್ಥೆಯಲ್ಲಿ ಹೊರಹೊಮ್ಮಿದ ಭಾಷೆಯದು. ಆಯಾ ದೇಶ ವಿಶೇಷಗಳಲ್ಲಿ ಭಿನ್ನ ಭಿನ್ನಭಾಷೆಗಳಿರಬಹುದು. ಆದರೆ ಸಮಗ್ರಭಾರತವನ್ನು ಒಂದುಗೂಡಿಸವ ಶಕ್ತಿಯಿರುವುದು ಕೇವಲ ಸಂಸ್ಕೃತಕ್ಕೆ ಮಾತ್ರ ಎಂದು ಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ. ರವಿವಾರ ಪ್ರಾತಃಕಾಲ ಗೋಕರ್ಣದ ಸಾಗರತೀರದ ಮಹರ್ಷಿ ದೈವರಾತ ವೇದಿಕೆಯಲ್ಲಿ ಅಖಿಲ ಕರ್ಣಾಟಕ ಸಂಸ್ಕೃತ ಪರಿಷತ್ತಿನ ಆರನೆಯ ರಾಜ್ಯಸ್ತರದ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನವನ್ನು ಅನುಗ್ರಹಿಸಿ ಮಾತನಾಡುತ್ತಿದ್ದ ಶ್ರೀಗಳುಆಸೇತು ಹಿಮಾಚಲದವರೆಗೂ ಭಾರತೀಯರ ಅಂತರಾಳದ ಭಾಷೆಯಾದ ಇದು ಐತಿಹಾಸಿಕವಾದ ಪ್ರಮಾದವೊಂದರಿಂದಾಗಿ ರಾಷ್ಟ್ರಭಾಷಾ ಸ್ಥಾನದಿಂದ ವಂಚಿತವಾಯಿತು ಎಂದು ಹೇಳಿ ಸಂಸ್ಕೃತ ಎಂದೂ ಮೃತಭಾಷೆಯಲ್ಲ, ಅದನ್ನು ಅರಿಯದವರ ಪಾಲಿಗೆ ಅಸ್ತಿತ್ವರಹಿತ. ನಮ್ಮ ಬದುಕಿನಲ್ಲಿ ಈ ಭಾಷೆಯನ್ನು ಬಳಸಿಕೊಳ್ಳುವುದರ ಮೂಲಕ ಮಾತ್ರ ಸಂಸ್ಕೃತವನ್ನು ಉಳಿಸಿಕೊಳ್ಳಬಹುದೇ ಹೊರತು ಯಾವುದೇ ಕಾನೂನು ಕಟ್ಟಳೆಗಳ ಮೂಲಕ ಉಳಿಸಲು ಅಸಾಧ್ಯ. ಇನ್ನು ಮುಂದೆ ಪ್ರತಿವರ್ಷ ಸಂಸ್ಕೃತಸಮ್ಮೇಳನವನ್ನು ಗೋಕರ್ಣದಲ್ಲಿ ಆಯೋಜಿಸಿದರೆ ಶ್ರೀ ದೇವಾಲಯದಿಂದ ಅದಕ್ಕೆಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದೂ ಶ್ರೀಗಳು ಘೋಷಿಸಿದರು. ಕರ್ಕಿಯ ದೈವಜ್ಙ ಮಠದ ಶ್ರೀ ಶ್ರೀಜ್ಙಾನೇಶ್ವರ ಭಾರತೀ ಶ್ರೀಗಳು ಅನುಗ್ರಹ ಭಾಷಣ ನೀಡಿ ಹಿಂದೊಂದು ಕಾಲದಲ್ಲಿ ಸಂಸ್ಕೃತವೇ ರಾಷ್ಟ್ರಭಾಷೆಯಾಗಿತ್ತು ಎಂಬುದಕ್ಕೆ ವಾಲ್ಮೀಕಿ ರಾಮಾಯಣವೇ ದಾಖಲೆಯಾಗಿದೆ. ಉತ್ತರದ ಶ್ರೀ ರಾಮನು ದಕ್ಷಿಣಕ್ಕೆ ಬಂದಾಗ ಆಂಜನೇಯನು ರಾಮನೊಂದಿಗೆ ಮಾತನಾಡಿದ್ದು ಸಂಸ್ಕೃತದಲ್ಲಿ. ಕ್ರಮೇಣ ಮಧ್ಯಂತರ ಕಾಲದಲ್ಲಿ ಪ್ರಾದೇಶಿಕಭಾಷೆಗಳು ಮಹತ್ವ ಪಡೆದುಕೊಂಡವು. ನಾವು ಸಂಪೂರ್ಣವಾಗಿ ಸಂಸ್ಕೃತವನ್ನು ಮರೆತು ತಾಯಿಯನ್ನುಬಿಟ್ಟ ಕೃತಘ್ನರಾದೆವು. ಇನ್ನಾದರೂ ನಮ್ಮ ಜೀವನದಲ್ಲಿ ಸಂಸ್ಕೃತವನ್ನು ಅನುಷ್ಠಾನಕ್ಕೆ ತರುವುದರ ಮೂಲಕ ಈ ಭಾಷೆಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದುನುಡಿದರು. ಕಾರವಾರದ ಶ್ರೀ ರಾಮಕೃಷ್ಣಾಶ್ರಮದ ಮಹಂತ ಶ್ರೀ ಶ್ರೀ ಭವೇಶಾನಂದಜೀ ಯವರು ಸ್ವಾಮಿ ವಿವೇಕಾನಂದರು, ಪರಮಹಂಸರು ಸಂಸ್ಕೃತಭಾಷೆಗೆ ಕೊಟ್ಟಮಹತ್ವವನ್ನು ವಿವರಿಸಿ ಸಂಸ್ಕೃತವನ್ನು ಮರೆತರೆ ಹೆತ್ತತಾಯಿಯನ್ನು ಮರೆತಂತೆ ಎಂದು ಹೇಳಿದರು. ಅಭ್ಯಾಗತರಾಗಿ ಪಾಲ್ಗೊಂಡ ಶ್ರೀ ಕ್ಷೇತ್ರಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತರಾದ ಶ್ರೀ ಭೀಮೇಶ್ವರ ಜೋಷಿಯವರು ಮಾತನಾಡಿ ಸರಕಾರವು ಪ್ರಾಥಮಿಕ ಐದನೆಯ ತರಗತಿಯಿಂದಲೇ ಸಂಸ್ಕೃತವನ್ನು ಒಂದು ಪಾಠ್ಯಭಾಷೆಯನ್ನಾಗಿಸಿದರೆ ಸುಲಭವಾಗಿ ಸಂಸ್ಕೃತವನ್ನು ಕಲಿಯಬಹುದು ಮತ್ತು ಸಂಸ್ಕೃತ ಪರೀಕ್ಷೆಗಳಲ್ಲಿ ಉತ್ತರ ಬರೆಯುವ ಭಾಷೆಯೂ ಸಂಸ್ಕೃತವಾಗುವಂತೆ ಮಾಡಬೇಕೆಂದರು. ವಿಧಾನಪರಿಷತ್ ಸದಸ್ಯ ಶ್ರೀ ಮೋಹನ ಲಿಂಬಿಕಾಯಿಯವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತ ಸಂಸ್ಕೃತಕ್ಕೆ ಜಾತಿ ಮತಗಳ ಭೇದವಿಲ್ಲ. ಈ ಭಾಷೆ ಜಾತ್ಯತೀತ ಹಾಗೂ ಮತಾತೀತ. ಹಾಗಿಲ್ಲದಿದ್ದಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್, ಶ್ರೀನಿಜಾಮುದ್ದೀನ್ ಮೊದಲಾದ ಮಹನೀಯರಿಗೆ ಸಂಸ್ಕೃತವನ್ನು ಕಲಿಯುವ ಅವಕಾಶವೆ ಇರುತ್ತಿರಲಿಲ್ಲ ಎಂದು ನುಡಿದು ಸರಕಾರ ಸಂಸ್ಕೃತದ ಉತ್ತೇಜನಕ್ಕಾಗಿ ಸಂಸ್ಕೃತ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಲು ಉದ್ಯುಕ್ತವಾಗಿದೆ ಎಂದು ನುಡಿದರು. ಮತ್ತೋರ್ವ ಪರಿಷತ್ ಸದಸ್ಯ ಶ್ರೀ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡುತ್ತ ಶಿಕ್ಷಣ ವಿಭಾಗದಲ್ಲಿ ತೆರವಾಗಿರುವ ಎಲ್ಲ ಶಿಕ್ಷಕ ಸ್ಥಾನಗಳನ್ನೂ ಕೂಡಲೇ ತುಂಬಲು ಸರಕಾರ ಎಲ್ಲ ಕ್ರಮ ಕೈಗೊಳ್ಲುತ್ತಿದೆ ಎಂದರಲ್ಲದೆ ಜಾಗತಿಕವಾದ ಅಪೂರ್ವ ಜ್ಙಾನ ಭಂಡಾರದ ಪೆಟ್ಟಿಗೆಯ ಕೀಲಿ ನಮ್ಮಲ್ಲಿಯೇ ಇದ್ದರೂ ಅದನ್ನರಿಯದೆ ಬೇರೆಡೆ ಹುಡುಕುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟರು. ಮಂಬಯಿಯ ಪ್ರಸಿದ್ಧ ಚಲನಚಿತ್ರ ನಟ ಶ್ರೀ ಸುರೇಶ ಒಬೆರಾಯ್ ಸುಂದರ ಕಥೆಯೊಂದನ್ನು ನಿರೂಪಿಸಿ ಬದುಕಿಗೆ ಸಂಸ್ಕೃತ ಹೇಗೆ ಅಗತ್ಯವಾಗಿದೆಯೆಂಬುದನ್ನು ತಿಳಿಸಿದರು. ವೇ|| ರಾಮಕೃಷ್ಣ ಭಟ್ಟ ಶಂಕರಲಿಂಗ ಮತ್ತು ಸಂಗಡಿಗರಿಂದ ವೇದಘೋಷ, ಕುಮಾರಿ ಲಲಿತಾ ಹಾಗೂ ಬಳಗದಿಂದ ಪ್ರಾರ್ಥನೆ, ಪರಿಷದಧ್ಯಕ್ಷ ಡಾ.ವಿ.ಕೆ.ಹಂಪಿಹೊಳಿಯವರಿಂದ ಸ್ವಾಗತ ನಡೆಯಿತು. ಡಾ.ಎಮ್.ಜಿ.ಹೆಗಡೆ ಸಂದೇಶಗಳನ್ನು ವಾಚಿಸಿದರು. ಡಾ.ಶಿಕಾರಿಪುರ ಕೃಷ್ಣಮೂರ್ತಿ ಹಾಗೂ ಡಾ.ಎಮ್.ಕೆ.ಶ್ರೀಧರ ಪ್ರಾಸ್ತಾವಿಕವಾಗಿ ಪರಿಷತ್ತಿನ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಗೋಕರ್ಣ ಪರಿಚಯ ಹಾಗೂ ಆರ್ಯಪ್ರಭ ಪತ್ರಿಕೆಯ ವಿಶೇಷಪುರವಣಿಗಳನ್ನು ಶ್ರೀ ಗಳವರು ಲೋಕಾರ್ಪಣಗೊಳಿಸಿದರು. ಕಾರಣಾಂತರಗಳಿಂದ ಅನುಪಸ್ಥಿತರಾಗಿದ್ದ ಸಮ್ಮೇಳನಾಧ್ಯಕ್ಷರ ಲಿಖಿತಭಾಷಣವನ್ನು ಕ್ಷೇತ್ರೀಯ ಸಮಿತಿಯ ಅಧ್ಯಕ್ಷ . ವೇ|| ರಾಮಕೃಷ್ಣ ಭಟ್ಟ ಶಂಕರಲಿಂಗ ವಾಚಿಸಿದರು. ಶ್ರೀ ವಿಘ್ನೇಶ್ವರ ಶಂಕರಲಿಂಗ ದಂಪತಿಗಳು ಶ್ರೀಗಳಿಗೆ ಫಲಕಾಣಿಕೆಗಳನ್ನು ಸಮರ್ಪಿಸಿದರು. ಕಾರ್ಯದರ್ಶಿ ಡಾ. ವೆಂಕಟೇಶ ಗಿರಿ ಧನ್ಯವಾದ ಸಲ್ಲಿಸಿದರು.
Leave a Reply