ಮುಖಪುಟ >> News, Recent, ಸುದ್ದಿಪುಟ

ಭಾರತದ ಅಖಂಡತೆಗೆ ಸಂಸ್ಕೃತ ಕಾರಣ-ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯ

..................................................................................................................................................

ಗೋಕರ್ಣ:  ಫೆ.16  ಸಮಗ್ರಭಾರತವನ್ನು ಒಂದಾಗಿ ಉಳಿಸಿರುವುದು ಭಾರತೀಯರ ಅಂತರಂಗದಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ಸಂಸ್ಕೃತ ಭಾಷೆ. ಒಂದು ಕಾಲದಲ್ಲಿ ಆಸೇತು ಹಿಮಾಚಲದವರೆಗೂ ಬಳಕೆಯಲ್ಲಿದ್ದುದು ಸಂಸ್ಕೃತ ಹತ್ತುಸಾವಿರ ವರ್ಷಗಳಿಗೂ ಮೀರಿದ ಇತಿಹಾಸವನ್ನು ಹೊಂದಿರುವ ಈ ಅಪೂರ್ವಭಾಷೆಯನ್ನು ವಿನಾಕಾರಣವಾಗಿ ಮಡಿವಂತರಭಾಷೆ, ಒಂದುವರ್ಗಕ್ಕೆ ಮಾತ್ರ ಸೀಮಿತವಾದ ಭಾಷೆ ಎಂದು ಆಧುನಿಕ ಬುದ್ಧಿಜೀವಿಗಳು ಮಾಡುತ್ತಿರುವ ವಾದದಲ್ಲಿ ಯಾವ ಹುರುಳೂ ಇಲ್ಲ. ಇಂದು ನಮ್ಮ ರಾಷ್ಟ್ರವು ಅಖಂಡವಾಗಿ ಉಳಿದಿದ್ದರೆ ಅದು ಸಂಸ್ಕೃತಭಾಷೆಯಿಂದ ಎಂದು ನಾಡಿನ ಖ್ಯಾತವಿದ್ವಾಂಸ ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಹೇಳಿದ್ದಾರೆ. ಇಂದು ಗೋಕರ್ಣದ ಸಾಗರ ತೀರದ ಮಹರ್ಷಿ ದೈವರಾತ ವೇದಿಕೆಯಲ್ಲಿ ನಡೆದ ಅಖಿಲ ಕರ್ಣಾಟಕ ಸಂಸ್ಕೃತ ಪರಿಷತ್ತಿನ ಆರನೆಯ ಸಂಸ್ಕೃತ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷ ಭಾಷಣ ಮಾಡುತ್ತಿದ್ದ ಶ್ರೀ ಆಚಾರ್ಯರು ಸಂಸ್ಕೃತ ಎಂದೂ ಮೃತ ಭಾಷೆಯಲ್ಲ, ಅದನ್ನು ತಿಳಿಯದವರ ಪಾಲಿಗಷ್ಟೇ ಅದು ಸತ್ತಭಾಷೆಯಾಗಿದೆ, ಅಂತಹವರ ಬಗ್ಗೆ ಅನುಕಂಪ ಪಡೋಣ ಎಂದು ನುಡಿದ ಅವರು ನಿಜವಾಗಿ ಸಂಸ್ಕೃತವನ್ನು ಕರ್ನಾಟಕದಲ್ಲಿ ಉಳಿಸಿದ ಕೀರ್ತಿ ಹಿಂದಿನ ಮುಖ್ಯಮಂತ್ರಿ ಶ್ರೀ ಗುಂಡೂರಾವ ಅವರದು.  ತನ್ನ ಸ್ಥಾನಕ್ಕೆ ಚ್ಯುತಿ ಬರಬಹುದಾದ ಸಂಭಾವ್ಯತೆಗಳಿದ್ದರೂ ಸಹ ದಿಟ್ಟ ನಿರ್ಧಾರ ಕೈಗೊಂಡು ಸಂಸ್ಕೃತಕ್ಷೇತ್ರಕ್ಕೆ ಸಹಾಯ ನೀಡಿದವರು ಅವರು. ಇಸ್ರೇಲ್ ನಂತಹ ಪುಟ್ಟ ರಾಷ್ಟ್ರವೊಂದು ಬಳಕೆಯಲ್ಲಿಯೇ ಇಲ್ಲದಿದ್ದ ಹೀಬ್ರೂ ಭಾಷೆಯನ್ನು ಪುನರುಜ್ಜೀವಿಸಲು ಸಾಧ್ಯವಾಗುವುದಾದರೆ ಸಂಸ್ಕೃತಕ್ಕೆ ಯಾಕೆ ಸಾಧ್ಯವಿಲ್ಲ ಕೇವಲ ಪರಭಾಷಾ ವ್ಯಾಮೋಹವೇ ನಮ್ಮ ಇಂದಿನ ಈಸ್ಥಿತಿಗೆ ಕಾರಣ ಎಂದುವಿಷಾದಿಸಿ ವೇದಸಂಸ್ಕೃತ ಪಂಡಿತರು ಸರಿಯಾಗಿ ಸಂಸ್ಕೃತವನ್ನುಓದಿಕೊಳ್ಳುವವರೆಗೂ ಈ ಭಾಷೆಗೆ ದುಃಸ್ಥಿತಿ ತಪ್ಪಿದ್ದಲ್ಲ. ಭಾಷೆಗೆ ಯಾವ ಜಾತಿಯೂ ಇಲ್ಲ. ಎಲ್ಲಿ ಒಳ್ಳೆಯದಿದೆಯೋ ಅದನ್ನು ಸ್ವೀಕರಿಸೋಣ ಎಂದೂ ಹೇಳಿದರು. ಉ.ಕ.ಜಿಲ್ಲೆಯ ಕನ್ನಡ ಸಾಹಿತ್ಯಪರಿಷತ್ತಿನ ಅಧ್ಯಕ್ಷ ಶ್ರೀರೋಹಿದಾಸ ನಾಯಕ ಮಾತನಾಡಿ ಸಂಸ್ಕೃತ ಮತ್ತು ಕನ್ನಡಗಳ ಸಂಬಂಧವನ್ನು ವಿಶ್ಲೇಷಿಸಿದರು. ಪರಿಷತ್ತಿನ ಗೌರವಾಧ್ಯಕ್ಷ ಡಾ.ರಾ.ಗಣೇಶ್ ಮಾತನಾಡಿ ಸಂಸ್ಕೃತದ ಸ್ಥಿತಿಗತಿಗಳನ್ನು ವಿವೇಚಿಸಿದರು.  ಗುಲಬರ್ಗದ ಸುಕ್ಷೇತ್ರ ಗಂವ್ಹಾರದ ಶ್ರೀ ಶ್ರೀ ಸೊಪಾನಾನಂದ ಶ್ರೀಗಳು ಆಶೀರ್ವಚನ ನೀಡಿದರು. ಸಮ್ಮೇಳನದ ಮಹಾಪೋಷಕರಾದ ಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಆಶೀರ್ವಚನ ನೀಡಿ ಮಹಾಶಿವರಾತ್ರಿ ಉತ್ಸವ ಸಂದರ್ಭದಲ್ಲಿ ಸಂಸ್ಕೃತ ಸಮ್ಮೇಳನ ನಡೆದದ್ದು ತುಂಬಾ ಸಂತೋಷ ತಂದಿದೆ. ಅಂತೆಯೇ ಬನ್ನಂಜೆ ಗೊವಿಂದಾಚಾರ್ಯ, ಶತಾವಧಾನಿ ಡಾ. ರಾ. ಗಣೇಶ ಮೊದಲಾದವರ ಉಪಸ್ಥಿತಿಯೂ ಸಹಸಮ್ಮೇಳನಕ್ಕೆ ಮೆರುಗುನೀಡಿದೆ ಎಂದು ಹೇಳಿ ಸಂಸ್ಕೃತಿಗೆ ಸಂಸ್ಕೃತವೇ ವಾಹನ, ಸಂಸ್ಕೃತವಿಲ್ಲದೇ ಭಾರತೀಯ ಸಂಸ್ಕೃತಿಯ ದರ್ಶನ ಅಸಾಧ್ಯ. ಸಾರ್ವಭೌಮನ ಕ್ಷೇತ್ರದಲ್ಲಿ ನಡೆದ ಈ ಸಮ್ಮೇಳನವು ಸಂಸ್ಕೃತಜ್ಙರಿಗೆ ನವೋಲ್ಲಾಸ ತರಲಿ ಎಂದು ಆಶೀರ್ವದಿಸಿದರು.  ವೇ||ರಾಮಕೃಷ್ಣ ಭಟ್ಟ, ಶಂಕರಲಿಂಗ ರಿಂದ ವೇದಘೋಷ, ಕುಮಾರಿ ಲಲಿತಾ ಶಂಕರಲಿಂಗ ರಿಂದ ಪ್ರಾರ್ಥನೆ ನಡೆದ ಈ ಸಭೆಯಲ್ಲಿ ಪ್ರೊ. ವಿನಾಯಕ ಭಟ್ಟ ಶಂಕರಲಿಂಗ ಸ್ವಾಗತಿಸಿದರು. ಡಾ.ವೆಂಕಟೇಶ ಗಿರಿ ವರದಿ ವಾಚಿಸಿದರು. ಡಾ.ಎಮ್.ಕೆ ಶ್ರೀಧರ್ ಸಮ್ಮೇಳನದ ನಿರ್ಣಯಗಳನ್ನು ಮಂಡಿಸಿದರು. ಡಾ.ಶ್ರೀಕಾಂತ ಜೋಷಿ, ಡಾ.ಗೀತಾ ಡಾ.ಮಧುಸೂದನ ಅಡಿಗರು ಸಮ್ಮೇಳನದ ಅನುಭವಗಳನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ವಿವಿಧ ರೀತಿಯಲ್ಲಿ ಸಮ್ಮೇಳನಕ್ಕೆ ಸಹಾಯನೀಡಿದ ಶಂಕರಲಿಂಗ ದಂಪತಿಗಳನ್ನು ಸಮ್ಮಾನಿಸಿದ್ದಲ್ಲದೆ, ಗೋಕರ್ಣದ ಹನ್ನೊಂದು ಮಂದಿ ವೇದ ಸಂಸ್ಕೃತವಿದ್ವಾಂಸರನ್ನು ಸತ್ಕರಿಸಲಾಯಿತು. ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ.ಪದ್ಮನಾಭ ಮರಾಠೆ ಧನ್ಯವಾದಸಲ್ಲಿಸಿದರು. ಡಾ.ಎಸ್.ಕೃಷ್ಣಮೂರ್ತಿ ನಿರ್ವಹಿಸಿದರು.

---------------------------------------------------------------------------------------------------------------------------------------------------------------------------------------

Leave a Reply