ಮುಖಪುಟ >> ಮಹಾ ಶಿವರಾತ್ರಿ

ಜನಸೇವೆ – ಸಾಮಾಜಿಕ ಜವಾಬ್ದಾರಿ : ರಾಘವೇಶ್ವರ ಶ್ರೀ

..................................................................................................................................................

ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೧೯ – ಸ್ವಾಮಿ ವಿವೇಕಾನಂದರು ಹೇಳಿದಂತೆ ಜಗತ್ತಿಗೆ ಭಾರತದ ಮುಖ್ಯ ಕೊಡುಗೆ ತ್ಯಾಗ ಮತ್ತು ಸೇವೆ. ಈ ಎರಡೂ ಗುಣಗಳೂ ಭಾರತೀಯರ ಬದುಕಿನಲ್ಲಿ ಹಾಸುಹೊಕ್ಕಾಗಿವೆ.

ಭಗವಂತ ಉದಾರ ಹೃದಯನಾಗಿ ನಮಗೆ ನೀಡಿದ ಕೊಡುಗೆಯಾದ ನಿಸರ್ಗ ಇಂದು ತೀರ ಕಲುಷಿತವಾಗುತ್ತಿದೆ. ಕೇವಲ ಸ್ವಾರ್ಥಕ್ಕಾಗಿ ಇನ್ನೆಂದೂ ಪುನಃ ಸರಿಪಡಿಸಲಾರದಂತಹ ದೋಷಗಳೂ ನಡೆಯುತ್ತವೆ. ಇಂತಹ ತಪ್ಪುಗಳನ್ನು ಸೇವಾಭಾವನೆಯ ಮೂಲಕ ಮಾತ್ರ ದೂರಮಾಡಬಹುದು. ಈ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಗೋಕರ್ಣದಲ್ಲಿ ನಡೆಯುತ್ತಿರುವ ಉ.ಕ. ಜಿಲ್ಲಾ ರಾಷ್ಟ್ರೀಯ ಸೇವಾ ಯೋಜನೆಯ ನಾಯಕತ್ವ ತರಬೇತಿ ಶಿಬಿರ ಅತ್ಯಂತ ಸ್ತುತ್ಯರ್ಹ ಪ್ರಯತ್ನ ಎಂದು ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.

ಜಿಲ್ಲಾ ಮಟ್ಟದ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಸಮಾರೋಪ ಸಮಾರಂಭ

ಜಿಲ್ಲಾ ಮಟ್ಟದ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಸಮಾರೋಪ ಸಮಾರಂಭ

ಇಂದು ಸಾಗರ ತೀರದ ವೇದಿಕೆಯಲ್ಲಿ ಆಯೋಜಿತವಾಗಿದ್ದ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡುತ್ತಿದ್ದ ಶ್ರೀಗಳು, ನಮ್ಮ ಚಟುವಟಿಕೆಗಳು ನಮ್ಮ ಸಂತೋಷಕ್ಕೆ ಮಾತ್ರ ಸೀಮಿತವಾಗದೇ ಸಮಾಜದ ಸಹಸ್ರ ಸಹಸ್ರ ಸಂಖ್ಯೆಯ ಜನರ ಬದುಕಿನ ಆನಂದಕ್ಕೆ ಕಾರಣವಾದರೆ ಮಾತ್ರ ಅದು ಬದುಕಿನ ಸಾರ್ಥಕತೆ. ಗೋಕರ್ಣದ ಶುದ್ಧೀಕರಣವನ್ನು ಸ್ವಾರ್ಥವಿಲ್ಲದ ಮುದ್ದು ಮಕ್ಕಳು ಪ್ರಾರಂಭಿಸಿದ್ದಾರೆ. ಈ ಕ್ರಿಯೆ ನಿಲ್ಲದೇ ಎಲ್ಲೆಡೆ ತುಂಬಿದ ಕಸ ದೂರಾಗಲಿ. ಈ ಕ್ಷೇತ್ರ ಎಲ್ಲರದೆಂಬ ಭಾವ ಎಲ್ಲರಲ್ಲಿ ತುಂಬಿರಲಿ ಎಂದೂ ಆಶಿಸಿ ಶಿಬಿರಾರ್ಥಿಗಳೆಲ್ಲರಿಗೆ ಪ್ರಮಾಣ ಪತ್ರವನ್ನು ಅನುಗ್ರಹಿಸಿದರು.

ಉದ್ಯಮಿ ಪ್ರಕಾಶ ಗಾಂವ್ಕರ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯಿಂದಾಗಿ ಬಾಲ್ಯದಲ್ಲಿಯೇ ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿಯ ಅರಿವು ಉಂಟಾಗುತ್ತದೆ. ಸಾಮಾಜಿಕ ಸೌಹಾರ್ದತೆ ಬೆಳೆಯುವುದಲ್ಲದೇ ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಭಯೋತ್ಪಾದನೆಯಂತಹ ರಾಷ್ಟ್ರ ಘಾತುಕ ಕೃತ್ಯಗಳ ವಿರುದ್ಧ ಜನಜಾಗೃತಿಗೂ ಸಹ ಪರಿಣಾಮಕಾರಿಯಾದ ಸಾಧನವಾಗುತ್ತದೆಯೆಂದು ಅಭಿಪ್ರಾಯಪಟ್ಟರು.

ಜಿ.ಪಂ. ಸದಸ್ಯ ಹೊನ್ನಪ್ಪ ನಾಯಕ ಮಾತನಾಡಿ ಶಿಬಿರವು ಈ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಾಂದಿಯಾಗಲೆಂದು ಹಾರೈಸಿದರು. ಗ್ರಾ.ಪಂ. ಉಪಾಧ್ಯಕ್ಷೆ ಭಾರತೀ ದೇವತೆ ಉಪಸ್ಥಿತರಿದ್ದರು. ಆರ್.ಎಸ್. ಹೆಗಡೆ ದಂಪತಿ ಸಭಾಪೂಜೆ ನೆರವೇರಿಸಿದರು. ಎನ್.ಎಸ್.ಎಸ್.ನ ಜಿಲ್ಲಾ ನೋಡಲ್ ಅಧಿಕಾರಿ ಎಂ.ಜಿ. ಗೋಳಿಕಟ್ಟೆ ಶ್ರೀಗಳಿಗೆ ಫಲ ಸಮರ್ಪಣೆ ಮಾಡಿ ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ವಿ. ಜಗದೀಶ ಶರ್ಮ ಸಭಾ ಕೂಪವನ್ನು ನಿರ್ವಹಿಸಿದರು.

---------------------------------------------------------------------------------------------------------------------------------------------------------------------------------------

Leave a Reply