ಮುಖಪುಟ >> ಮಹಾ ಶಿವರಾತ್ರಿ

ಧಾರ್ಮಿಕ ಶ್ರದ್ಧಾ ಕೇಂದ್ರಗಳು ನೆಮ್ಮದಿಯ ಸ್ಥಾನಗಳಾಬೇಕು: ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರಭಾರತೀ ಶ್ರೀ

..................................................................................................................................................

ನಂದಿಶ್ವರ ವೇದಿಕೆ, ಗೋಕರ್ಣ, ಫೆ.೨೦ – ನಮ್ಮೆಲ್ಲರ ಬದುಕಿಗೆ ಅತ್ಯಂತ ಅಗತ್ಯವಾದದ್ದು ಎರಡೇ, ಆರೋಗ್ಯ ಮತ್ತು ನೆಮ್ಮದಿ. ಒಂದು ಶಾರೀರಿಕ, ಮತ್ತೊಂದು ಆಧ್ಯಾತ್ಮಿಕ. ಆರೋಗ್ಯ ಬಹಿರಂಗದ ಅಗತ್ಯವಾದರೆ, ನೆಮ್ಮದಿ ಅಂತರಂಗಕ್ಕೆ ಅಪೇಕ್ಷಿತ. ಇಂದಿನ ಧಾವಂತದ ಯುಗದಲ್ಲಿ ಬದುಕಿನ ಮೌಲ್ಯಗಳಾದ ಇವೆರಡನ್ನು ಬಿಟ್ಟು ಬೇಡವಾದವುಗಳ ಬೆನ್ನು ಹತ್ತಿ ಹೋಗುತ್ತಿದ್ದೇವೆ. ಅಷ್ಟೇ ಅಲ್ಲ ಹಣಕ್ಕಾಗಿ ಶರೀರ ಮನಸ್ಸುಗಳೆರಡರ ಸ್ಥಿತಿಯನ್ನೂ ಕೆಡಿಸಿಕೊಳ್ಳುತ್ತಿದ್ದೇವೆ. ಆಮೇಲೆ ಇದನ್ನು ಪಡೆಯಲು ಹಣ ಖರ್ಚು ಮಾಡುತ್ತೇವೆ. ಬದುಕಿಗೆ ಹಣದ ಅಗತ್ಯವಿದೆ. ಹಾಗೆಂದು ಹಣವೇ ಸರ್ವಸ್ವವಲ್ಲ. ನೆಮ್ಮದಿಯ ಭಾವ, ಮಾನಸಿಕ ಉಲ್ಲಾಸ ಧಾರ್ಮಿಕ ಕೇಂದ್ರಗಳಲ್ಲಿ ಲಭ್ಯವಾಗಬೇಕು. ದೇವಾಲಯಗಳ ನಿರ್ಮಿತಿಯ ಉದ್ದೇಶವೂ ಸಹ ಇದೇ ಆಗಿದೆಯೆಂದು ಪೂಜ್ಯ ಶ್ರೀರಾಘವೇಶ್ವರಭಾರತೀ ಶ್ರೀಗಳವರು ಹೇಳಿದರು.

ಮಂತ್ರಾಲಯದ ಆಡಳಿತಾಧಿಕಾರಿ ಶ್ರೀ ರಾಜಾ ಎಸ್ ರಾಜಗೋಪಾಲಾಚಾರ್ಯ ಅವರಿಗೆ ’ಸಾರ್ವಭೌಮ’ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು.

ಮಂತ್ರಾಲಯದ ಆಡಳಿತಾಧಿಕಾರಿ ಶ್ರೀ ರಾಜಾ ಎಸ್ ರಾಜಗೋಪಾಲಾಚಾರ್ಯ ಅವರಿಗೆ ’ಸಾರ್ವಭೌಮ’ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು.

ಮಹಾಶಿವರಾತ್ರಿ ಉತ್ಸವದ ಮೂರನೆಯ ದಿನವಾದ ಇಂದು ಸಾಗರ ತೀರದ ನಂದಿಕೇಶ್ವರ ವೇದಿಕೆಯಲ್ಲಿ ನಡೆದ ಧರ್ಮ ಸಭೆಯಲ್ಲಿ ಸಾನ್ನಿಧ್ಯವನ್ನಿತ್ತು, ಆಶೀರ್ವಚನವನ್ನು ಅನುಗ್ರಹಿಸಿದ ಶ್ರೀಗಳು, ಗುರು ಸಾರ್ವಭೌಮ ಎಂದೇ ಖ್ಯಾತರಾದ ಶ್ರೀರಾಘವೇಂದ್ರಸ್ವಾಮಿಗಳ ಮಂತ್ರಾಲಯ ಕ್ಷೇತ್ರದ ಸರ್ವಾಧಿಕಾರಿ ಶ್ರೀ ರಾಜಾ ಎಸ್. ರಾಜಗೋಪಾಲಾಚಾರ್ಯರಿಗೆ ಇಂದಿನ ಸಾರ್ವಭೌಮ ಸಮ್ಮಾನದೊಂದಿಗೆ ಪುರಸ್ಕರಿಸಿದರು.

ಇವರು ಮಂತ್ರಾಲಯ ಕ್ಷೇತ್ರದಲ್ಲಿ ಅದ್ಭುತವೆನ್ನಬಹುದಾದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ. ಜಾಗತಿಕ ಸ್ತರದಲ್ಲಿ ಭಕ್ತರನ್ನು ಹೊಂದಿದ ಕ್ಷೇತ್ರ ಮಂತ್ರಾಲಯ. ಅಂತೆಯೇ ಗೋಕರ್ಣವೂ ಅಭಿವೃದ್ಧಿ ಹೊಂದಬೇಕು. ಇಲ್ಲಿಯವರೆಗೆ ಆತ್ಮಲಿಂಗ ರೂಪದಲ್ಲಿ ಸಾರ್ವಭೌಮ ಸುಪ್ತನಾಗಿದ್ದ. ಇದೀಗ ವ್ಯಕ್ತ ರೂಪದಿಂದ ಈ ವೇದಿಕೆಯಲ್ಲಿ ಪ್ರಕಟನಾಗಿದ್ದಾನೆ ಎಂದೂ ಹೇಳಿದರು.


ಶ್ರೀ ಗುರುದೇವದತ್ತ ಸಂಸ್ಥಾನ, ಒಡಿಯೂರಿನ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳು ಶಿವ ಸಂದೇಶವನ್ನು ನೀಡುತ್ತ ಶಿವ ಎಂದರೆ ಮಂಗಳ, ಗೋಕರ್ಣದಲ್ಲಿ ಅಶಿವದ ವಾರ್ತೆಯೂ ಇರಲು ಅಸಾಧ್ಯ. ಇಲ್ಲಿ ಎಲ್ಲೆಲ್ಲಿಯೂ ಶಿವಮಯವೇ. ಇಲ್ಲಿ ವಿಸ್ತಾರವಾದ ಕಡಲಿದೆ. ಅದು ನಮಗೆ ವಿಸ್ತೃತವಾಗಿ ಬೆಳೆಯುವ ಸಂದೇಶ ನೀಡುತ್ತಿದೆ. ಕಡಲಿನ ಅಲೆಗಳು ಸಮುದ್ರದ ಕಶ್ಮಲವನ್ನು ದೂರ ಮಾಡುವಂತೆ ನಮ್ಮೊಡಲನ್ನು, ಹೃದಯವನ್ನೂ ಶೋಧಿಸುವ ಅಗತ್ಯವನ್ನು ಕಡಲು ಬೋಧಿಸುತ್ತದೆ. ಪ್ರಮಾಣವಿಲ್ಲದ್ದನ್ನು ವಿಜ್ಞಾನ ಒಪ್ಪುವುದಿಲ್ಲ. ಆದರೆ ಅಧ್ಯಾತ್ಮ ಪ್ರಪಂಚದಲ್ಲಿ ಅನುಭವಕ್ಕೇ ಪ್ರಾಮಾಣ್ಯ. ಪೂಜ್ಯ ಶ್ರೀ ರಾಘವೇಶ್ವರಭಾರತೀ ಶ್ರೀಗಳವರ ಶ್ರೀಕ್ಷೇತ್ರ ಪುನರುತ್ಥಾನ ಸಂಕಲ್ಪ ಸಂಪೂರ್ಣ ಫಲದಾಯಕವಾಗಲಿ ಎಂದು ಹಾರೈಸಿದರು.


ಸಾರ್ವಭೌಮ ಪ್ರಶಸ್ತಿ ಪುರಸ್ಕೃತ ಶ್ರೀ ರಾಜಾ ಎಸ್. ರಾಜಗೋಪಾಲಾಚಾರ್ಯರು ಮಾತನಾಡಿ ಈ ಪ್ರಶಸ್ತಿ ಬಹುದೊಡ್ಡ ಜವಾಬ್ದಾರಿಯನ್ನು ನನಗೆ ನೀಡಿದೆ. ಗೋ ರಕ್ಷಣೆಯಂತಹ ಮಹಾಕಾರ್ಯವನ್ನು ಜಾಗತಿಕ ಸ್ತರದಲ್ಲಿ ಕೈಗೊಂಡ ಶ್ರೀಗಳ ಉಪಕ್ರಮ ಅತಿ ವಿಶಿಷ್ಟ. ನಿನ್ನೆ ವಿಶ್ವಸಂಸ್ಥೆಯಲ್ಲಿ ಭಾರತೀಯ ಗೋವಂಶ ಹಾಗೂ ಗೋಮೂತ್ರದ ಬಗೆಗೇ ಆರು ಗಂಟೆಗಳ ವಿಸ್ತೃತ ಚರ್ಚೆ ನಡೆದಿದೆ. ಇಂತಹ ವಿಶ್ವ ಜಾಗೃತಿಯನ್ನು ಮಾಡಿಸಿದ ಹೊಸ ಯುಗದ ಹರಿಕಾರ ಪೂಜ್ಯ ಶ್ರೀ ರಾಘವೇಶ್ವರ ಶ್ರೀಗಳು ಗೋಕರ್ಣ ಕ್ಷೇತ್ರದ ಉತ್ಥಾನಕ್ಕೆ ಕಟಿಬದ್ಧರಾಗಿದ್ದಾರೆ. ಇಲ್ಲಿ ಎಲ್ಲರೂ ಒಂದೇ. ಬಡವ-ಬಲ್ಲಿದ ಎಂಬ ಭೇದವಿಲ್ಲ. ಇನ್ನೈದು ವರ್ಷಗಳ ನಂತರ ಗೋಕರ್ಣಕ್ಕೆ ಬಂದರೆ ಇಂದಿನ ಗೋಕರ್ಣದ ಗುರುತೂ ಸಿಗಲಾರದಂತಹ ಬದಲಾವಣೆಗಳು ಆಗಲಿವೆ ಎಂದು ಹೇಳಿ ಗೋಕರ್ಣದಲ್ಲಿರುವಂತೆ ಮಂತ್ರಾಲಯದಲ್ಲಿಯೂ ಸಹ ಹಿರಣ್ಯಕಶುಪುವಿನಿಂದ ಅರ್ಚಿತವಾದ ಈಶ್ವರ ಲಿಂಗವಿದ್ದು, ಸ್ವಾಮಿಗಳು ಪ್ರತಿದಿನವೂ ಅದನ್ನು ಅರ್ಚಿಸುತ್ತಾರೆ. ಹೀಗೆ ಈ ಎರಡೂ ಕ್ಷೇತ್ರಗಳಲ್ಲಿ ಸಾಮ್ಯವಿದೆ ಎಂದು ನುಡಿದರು.

ತಾಲೂಕು ಪಂಚಾಯತ್ ಅಧ್ಯಕ್ಷ ನಾಯಕ್, ಉದ್ಯಮಿ ಪರಶಿವಮೂರ್ತಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಗಣೇಶ ಪ್ರಸಾದ ಇವರು ಅಭ್ಯಾಗತರಾಗಿ ತಮ್ಮ ಅನಿಸಿಕೆಗಳಿಗೆ ಶಬ್ದರೂಪವನ್ನು ಇತ್ತರು. ಎಸ್. ಶಂಭುಭಟ್ಟರಿಂದ ಸಭಾಪೂಜೆ, ಪಂಚಾಯತ ಸದಸ್ಯ ಮಹೇಶ ಶೆಟ್ಟಿ ದಂಪತಿಯಿಂದ ಸಭಾರ್ಚನೆ ನಡೆಯಿತು. ವಿ. ಜಗದೀಶ ಶರ್ಮಾರಿಂದ ನಿರ್ವಹಣೆ ಹಾಗೂ ಸುಬ್ರಹ್ಮಣ್ಯ ಶಾಸ್ತ್ರಿಗಳಿಂದ ಸಮ್ಮಾನ ಪತ್ರ ವಾಚನ ನಡೆಯಿತು.


---------------------------------------------------------------------------------------------------------------------------------------------------------------------------------------

One Response to “ಧಾರ್ಮಿಕ ಶ್ರದ್ಧಾ ಕೇಂದ್ರಗಳು ನೆಮ್ಮದಿಯ ಸ್ಥಾನಗಳಾಬೇಕು: ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರಭಾರತೀ ಶ್ರೀ”

  1. raghava

    good

    February 20th, 2009 | 7:00 pm

Leave a Reply