ಮುಖಪುಟ >> ಮಹಾ ಶಿವರಾತ್ರಿ

ಗೋಕರ್ಣ ಕ್ಷೇತ್ರದಲ್ಲಿ ಹೊಸ ಶಕೆ ಪ್ರಾರಂಭ : ಚೆಲುವರಾಯಸ್ವಾಮಿ

..................................................................................................................................................

ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೧೯ : ಗೋಕರ್ಣ ಕ್ಷೇತ್ರದಲ್ಲಿ ಈ ವರ್ಷ ಎಲ್ಲವೂ ಹೊಸತು. ಶಿವರಾತ್ರಿಯ ಸಡಗರ, ಸಾಂಸ್ಕೃತಿಕ ಸೌರಭ, ಲಕ್ಷ ಲಕ್ಷ ಮಂದಿ ಯಾತ್ರಿಕ ಭಕ್ತರ ಹೊಟ್ಟೆಯನ್ನು ತಂಪಾಗಿಸುವ ಅಮೃತಾನ್ನ, ಧಾರ್ಮಿಕ ಪ್ರಕಲ್ಪಗಳು, ಈ ಎಲ್ಲ ಹೊಸತುಗಳ ಮೂಲಕ ಕ್ರಾಂತಿಕಾರಿ ಪರಿವರ್ತನೆಯೊಂದಿಗೆ ಶ್ರೀ ಕ್ಷೇತ್ರದಲ್ಲಿ ಹೊಸ ಶಕೆ ಆರಂಭಗೊಂಡಿದೆ.

ಈ ಸಾರ್ವಭೌಮನ ದಿವ್ಯೋತ್ಸವದಲ್ಲಿ ನಮ್ಮೆಲ್ಲ ವೈಯ್ಯಕ್ತಿಕ ಹಿತಾಸಕ್ತಿಗಳನ್ನು ಬದಿಗಿರಿಸಿ, ಭಗವಂತನ ಲೀಲೋತ್ಸವದಲ್ಲಿ ಪಾಲ್ಗೊಳ್ಳದಿದ್ದರೆ ನಮ್ಮಂತಹ ನತದೃಷ್ಟರು ಬೇರೆ ಇಲ್ಲ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ನುಡಿದರು.

ಕರ್ನಾಟಕ ಸರಕಾರದ ಮಾಜಿ ಮಂತ್ರಿಗಳಾದ ಶ್ರೀ ಚೆಲುವರಾಯ ಸ್ವಾಮಿ ಯವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಿರುವುದು

ಕರ್ನಾಟಕ ಸರಕಾರದ ಮಾಜಿ ಮಂತ್ರಿಗಳಾದ ಶ್ರೀ ಚೆಲುವರಾಯ ಸ್ವಾಮಿ ಯವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಿರುವುದು

ಮಹಾಶಿವರಾತ್ರಿ ಉತ್ಸವದ ಎರಡನೆಯ ದಿನವಾದ ಇಂದು ನಂದಿಕೇಶ್ವರ ವೇದಿಕೆಯಲ್ಲಿ ನಡೆದ ಧರ್ಮಸಭೆಯ ಸಾರ್ವಭೌಮ ಪ್ರಶಸ್ತಿ ವಿತರಣಾ ಸಮಾರಂಭದ ಮುಖ್ಯಾಭ್ಯಾಗತರಾಗಿ ಮಾತನಾಡುತ್ತಿದ್ದ ಅವರು ಪುರಾಣ ಪ್ರಸಿದ್ಧ ಕ್ಷೇತ್ರವಾಗಿಯೂ ಅಭಿವೃದ್ಧಿ ಹೊಂದದೇ ನಿರ್ಲಕ್ಷಿತವಾಗಿದ್ದ ಈ ಕ್ಷೇತ್ರದ ಅಭಿವೃದ್ಧಿಯ ಕುರಿತಾಗಿ ಪೂಜ್ಯ ಶ್ರೀ ರಾಘವೇಶ್ವರಭಾರತೀ ಶ್ರೀಗಳು ಕಳೆದ ಆರು ತಿಂಗಳಲ್ಲಿ ನಂಬಲಸಾಧ್ಯವಾದ ಹಲವಾರು ಬದಲಾವಣೆಗಳನ್ನು ತಂದಿದ್ದಾರೆ.

ಸರ್ವಾಂಗೀಣ ಅಭಿವೃದ್ಧಿಯ ಹಲವಾರು ಕನಸುಗಳು ಸಾಕಾರಗೊಳ್ಳಲಿವೆ. ಅವರ ಈ ಎಲ್ಲ ಪ್ರಯತ್ನಗಳ ಫಲ ನಮಗೆ ಹೊರತು ಸರ್ವಸಂಗ ಪರಿತ್ಯಾಗಿಗಳಾದ ಪೂಜ್ಯ ಶ್ರೀಗಳಿಗೆ ಯಾವ ಫಲಾಪೇಕ್ಷೆಯೂ ಇಲ್ಲ. ಮಹಾತ್ಮರ ಸಂಕಲ್ಪಕ್ಕೆ ವಿಫಲತೆ ಎಂಬುದು ಯಾವ ಕಾಲದಲ್ಲಿಯೂ ಇಲ್ಲ. ಪೂಜ್ಯರು ಆದೇಶಿದ್ದನ್ನು ತಲೆಯಲ್ಲಿ ಹೊತ್ತು ನಡೆಯುವ ನಮ್ಮಂತಹ ಭಕ್ತರ, ಜನತೆಯ ಭಾಗ್ಯ ತುಂಬ ದೊಡ್ಡದು. ಪರಿವರ್ತನೆಯ ಯುಗದಲ್ಲಿ ಕೊಂಚ ವಿರೋಧಿಗಳು ಕಂಡುಬರುವುದು ಸಹಜ. ಆದರೆ ಅದನ್ನು ನಿರ್ಲಕ್ಷಿಸಿ, ನಾವು ಗುರಿಯತ್ತ ಸಾಗುವುದಗತ್ಯ ಎಂದೂ ಹೇಳಿದರು.

ಎರಡನೆಯ ದಿನದ ಸಾರ್ವಭೌಮ ಪ್ರಶಸ್ತಿಯನ್ನು ಸ್ವೀಕರಿಸಿದ ಕನ್ನಡದ ಕಬೀರ ಎಂದೇ ಖ್ಯಾತರಾದ ಸೂಫಿ ಸಂತ ಇಬ್ರಾಹಿಂ ಸುತಾರಾ ದೂರದ ಗುಲ್ಬರ್ಗದಲ್ಲಿರುವ ತೀರ ಸಾಮಾನ್ಯನಾದ ನನ್ನನ್ನು ನಾಡಿಗೆ ಪರಿಚಯಿಸಿದ ಪೂಜ್ಯ ಶ್ರೀಗಳ ಕರುಣೆ ತುಂಬ ದೊಡ್ಡದು. ಇದು ನನ್ನ ಯೋಗ್ಯತೆಗೆ ಮೀರಿದ ಸನ್ಮಾನ. ಯಾರನ್ನು ಸ್ಮರಣೆ ಮಾಡಿದರೆ ಭಗವಂತನ ಉಪಾಸನೆ ಆಗುವುದೋ ಅವರೇ ಮಹಾತ್ಮರು. ಕರುಣೆ, ಸತ್ಕಲೆ, ಸುಗುಣಗಳನ್ನು ಹೊಂದಿದವನೇ ನಿಜವಾದ ಗುರು ಎಂದು ಶ್ರೀ ನಿಜಗುಣ ಶಿವಯೋಗಿಗಳು ಹೇಳುತ್ತಾರೆ. ಅಂತಹ ಗುರುವನ್ನು ಜಾತಿ, ಮತ, ಪಂಥದ ಭೇದವಿಲ್ಲದೇ ಗುಣವನ್ನು ಗುರುತಿಸಿ, ಗ್ರಹಿಸಿ, ಗೌರವಿಸುವ ಶಿಷ್ಯನಿಗೆ ಆಲಂಬನ ನೀಡಿ, ಉದ್ಧರಿಸುವ ನಿಜವಾದ ಗುರುವನ್ನು ಪೂಜ್ಯ ಶ್ರೀ ಶ್ರೀ ರಾಘವೇಶ್ವರರಲ್ಲಿ ನಾನು ಕಂಡಿದ್ದೇನೆ. ಗೋಕರ್ಣಕ್ಕೆ ಭಗವಂತ ಕೊಟ್ಟು ಮರೆತಿದ್ದಾನೆ. ಅಪಾರ ಕಡಲ ರಾಶಿ, ಶತಶೃಂಗ ಪರ್ವತ, ಇವೆಲ್ಲ ಪ್ರಕೃತಿ, ಪರಮಾತ್ಮನ ಪ್ರತಿಕೃತಿ, ಪ್ರತಿರೂಪ.

ನಿರಾಕಾರನಾದ ಭಗವಂತನದೇ ಇನ್ನೊಂದು ಆಕಾರ. ಗುರುವನ್ನು ವರ್ಣಿಸಲು ಮಾನವನಿಗೆ ಅಸಾಧ್ಯವೆನ್ನುತ್ತಾರೆ ಕಬೀರ. ಇಂತಹ ಗುರುವನ್ನು ಪಡೆದು ಅವರ ಮಾರ್ಗದರ್ಶನದಲ್ಲಿ ನಡೆಯುವ ಅವಕಾಶವನ್ನು ಪರಮಾತ್ಮ ನಮಗೆ ನೀಡಿದ್ದಾನೆ. ಇದಕ್ಕಿಂತ ದೊಡ್ಡದಾದ ಭಾಗ್ಯ ಬದುಕಿನಲ್ಲಿ ಬೇರೆ ಇಲ್ಲ ಎಂದು ಅತ್ಯಂತ ಭಾವುಕತೆಯಿಂದ ತಮ್ಮ ಮನದಾಳವನ್ನು ತೆರೆದಿಟ್ಟರು.

ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಮಾತನಾಡಿ ಉತ್ತರ ಕರ್ನಾಟಕದ ಸಂತರು ನಾಡಿನ ಭಾಷೆ, ಕಲೆಗಳನ್ನು, ಸಂಸ್ಕೃತಿಯನ್ನು ಸಮೃದ್ಧಿಗೊಳಿಸಿದ್ದಾರೆ. ಮಾನಸ ಸರೋವರದ ದರ್ಶನಕ್ಕೆ ಹೋಗುವಾಗ ಓಂಕಾರ ಪರ್ವತದ ದರ್ಶನವಾಗುವಂತೆ ಗೋಕರ್ಣದ ಸನಿಹ ಪ್ರಸಿದ್ಧ ಓಂ ಕಡಲ ತೀರವಿದೆ. ಇಂತಹ ಸುಂದರ ಪ್ರಕೃತಿಯನ್ನು ಯಾವುದೇ ಜವಾಬ್ದಾರಿಯಿಲ್ಲದೇ ಹಾಳುಗೆಡವುತ್ತಿದ್ದೇವೆ. ಇಂತಹ ನಿರ್ಲಕ್ಷ್ಯಕ್ಕೆ ಯಾವ ಕ್ಷಮೆಯೂ ಇಲ್ಲ. ಆಧುನಿಕ ಭಸ್ಮಾಸುರರಾಗುತ್ತಿದ್ದೇವೆ. ಇಂತಹುದೇ ಪ್ರವೃತ್ತಿ ಮುಂದುವರೆದರೆ ನಮ್ಮದೆಲ್ಲವನ್ನೂ, ನಿಸರ್ಗದ ಕೊಡುಗೆಯೆಲ್ಲವನ್ನೂ ನಾವು ಶಾಶ್ವತವಾಗಿ ಕಳೆದುಕೊಳ್ಳುತ್ತೇವೆ.

ಇಂದಿನ ಯುಗದಲ್ಲಿ ಮೂರ್ತಿ ಭಂಜಕ ಸ್ವಭಾವ ಜನರಲ್ಲಿ ಹೆಚ್ಚುತ್ತಿದೆ. ಮನುಷ್ಯತ್ವ ಕಳೆದು ಹೋಗುತ್ತಿದೆ. ಒಳ್ಳೆಯ ಕೆಲಸವನ್ನು ಗುರುತಿಸುವಂತಹ ಸಮತ್ವ ಬುದ್ಧಿಯೂ ಇಲ್ಲದೇ ವಿನಾಕಾರಣವಾಗಿ ಸನ್ನಡತೆಯ ವ್ಯಕ್ತಿಗಳನ್ನೂ ದೂರೀಕರಿಸುತ್ತಿದ್ದೇವೆ. ಇಂತಹ ದುರ್ಬುದ್ಧಿಯನ್ನು ದೂರವಾಗಿಸದೇ ಯಾವ ಮನುಷ್ಯನೂ ಉದ್ಧಾರವಾಗಲಾರನು.

ಶ್ರೀಗಳು ಆಯೋಜಿಸಿದ ಗೋಕರ್ಣ ಕ್ಷೇತ್ರಾಭಿವೃದ್ಧಿ ಮೊದಲಾದ ಒಂದೊಂದು ಕಾರ್ಯಗಳೂ ವ್ಯಕ್ತಿಯೋರ್ವನ ಜೀವಮಾನದ ಸಾಧನೆ. ಹನುಮ ಉದಿಸಿದ ಈ ನಾಡಿನಲ್ಲಿ ಪರಿಸರದಿಂದ ಪರಮಾತ್ಮನ ಸಾಕ್ಷಾತ್ಕಾರವಾಗಲಿದೆ ಎಂದೂ ಹೇಳಿದರು.

ದಿವ್ಯ ಸಾನ್ನಿಧ್ಯ ನೀಡಿದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ಪ್ರತಿಯೋರ್ವ ಮಗುವೂ ಬಾಲ್ಯದಲ್ಲಿ ತಾನು ಬೇಗ ಬೆಳೆದು ದೊಡ್ಡವನಾಗಬೇಕೆಂದು ಬಯಸುತ್ತದೆ. ಆದರೆ ನೈಜಾರ್ಥದಲ್ಲಿ ದೊಡ್ಡವನಾಗುವುದು ತಾನು ಚಿಕ್ಕವನು ಎಂಬ ಭಾವ ಮನಸ್ಸಿನಲ್ಲಿ ಮೂಡಿದಾಗ. ಅಪಾರವಾದ ಸಾಗರದ ಎದುರು ನಿಂತಾಗ ನಮ್ಮ ಸಣ್ಣತನ ಅರಿವಿಗೆ ಬರುತ್ತದೆ. ಗೋಕರ್ಣದಲ್ಲಿ ರಾವಣನಂತಹ ಭುಜಬಲ ಪರಾಕ್ರಮಿಯ ಗರ್ವವನ್ನು ರಸಾತಳಿಸಿದ ಅಹಂಕಾರ ಸಲ್ಲ.

ಶಿವನ ಕರುಣೆ ಎಂಬ ಭಾವ ಮಾತ್ರ ಇಲ್ಲಿ ಸಲ್ಲುತ್ತದೆ. ಇಂದು ಸಾರ್ವಭೌಮ ಪ್ರಶಸ್ತಿಗೆ ಭಾಜನರಾದ ಇಬ್ರಾಹಿಂ ಸುತಾರಾ ನಾವು ಕಂಡ ಅತೀ ಅಪರೂಪದ ವ್ಯಕ್ತಿಗಳಲ್ಲಿ ಓರ್ವರು. ದೈವದತ್ತವಾದ ತಮ್ಮ ವಾಣಿಯನ್ನು ಅವರು ಎಂದೂ ಹಣಕ್ಕಾಗಿ ಬಳಸಲಿಲ್ಲ. ಮಾತನ್ನು ಮಾರಿ ಜೀವಿಸುವ ವ್ಯಕ್ತಿಯಲ್ಲ. ತತ್ತ್ವ ನಿಷ್ಠೆ ಅವರ ಸ್ಥಾಯೀ ಭಾವ. ನುಡಿದಂತೆ ನಡೆಯುವ ಪರಿಶುದ್ಧ ಅಂತರಂಗದ ಸರಳ ಜೀವಿ. ವೇದಾಂತದ ಅತಿರೂಢ ತತ್ತ್ವಾನುಭೂತಿಯನ್ನು ಸರಳವಾಗಿ ಹೇಳಬಲ್ಲ ವಾಗ್ಮಿ. ಶಿವರಾತ್ರಿಯ ಈ ಮಂಗಳಕರ ಸಮಯದಲ್ಲಿ ಭವದ ವೈಭವ ಬೇಡ. ಭಾವದ ವೈಭವ ನಡೆಯಲಿ ಎಂದು ಆಶಿಸಿದರು.

---------------------------------------------------------------------------------------------------------------------------------------------------------------------------------------

Leave a Reply