ಮುಖಪುಟ >> ಮಹಾ ಶಿವರಾತ್ರಿ

ತ್ಯಾಗಬುದ್ಧಿಯಿಂದ ಮಾತ್ರ ಪರಮಾತ್ಮ ಸಾಕ್ಷಾತ್ಕಾರ – ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ

..................................................................................................................................................

ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೨೫ – ಜಗತ್ತಿಗೆ, ಸಮಾಜಕ್ಕೆ ನನ್ನಿಂದ ಒಳಿತಾಗಲಿ ಎಂಬ ಬುದ್ಧಿಯಿಂದ ಮಾಡಿದ ಸ್ವಾರ್ಥ ಲೇಪವಿಲ್ಲದ ಕಾರ್ಯದಿಂದ ಮಾತ್ರ ಪರಮಾತ್ಮನನ್ನು ಹೊಂದಲು ಸಾಧ್ಯ. ಇದೇ ಮಾನವನಲ್ಲಿ ಮಾಧವನನ್ನು ನೋಡುವ ರೀತಿಯೂ ಸಹ ಜಗತ್ತಿನ ಎಲ್ಲ ಕಷ್ಟಕೋಟಲೆಗಳನ್ನು ತಾನು ನುಂಗಿ ಒಳ್ಳೆಯದನ್ನು ಜಗತ್ತಿಗೆ ನೀಡುವ ಸಂಕೇತ ಹಾಲಾಹಲವನ್ನು ಕುಡಿದು ಲೋಕಕ್ಕೆ ಶುಭವನ್ನು ನೀಡುವ ಈಶ್ವರನಲ್ಲಿ ವ್ಯಕ್ತವಾಗಿದೆ ಎಂದು ಹರಿಹರಪುರದ ಶ್ರೀಶಾರದಾಪೀಠಂನ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.

ಯಕ್ಷಗಾನ ದಿಗ್ಗಜ ದಿ.ಕೆರೆಮನೆ ಶ್ರೀ ಶಂಭು ಹೆಗಡೆಯವರಿಗೆ ಸಾರ್ವಭೌಮ ಸಮ್ಮಾನ ಪ್ರಶಸ್ತಿ ಪ್ರದಾನ.

ಯಕ್ಷಗಾನ ದಿಗ್ಗಜ ದಿ.ಕೆರೆಮನೆ ಶ್ರೀ ಶಂಭು ಹೆಗಡೆಯವರಿಗೆ ಸಾರ್ವಭೌಮ ಸಮ್ಮಾನ ಪ್ರಶಸ್ತಿ ಪ್ರದಾನ.


ಶಿವರಾತ್ರಿಯ ಉತ್ಸವದ ಎಂಟನೆಯ ದಿನದ ಧರ್ಮಸಭೆಯಲ್ಲಿ ಸಾನ್ನಿಧ್ಯವನ್ನಿತ್ತು ಅನುಗ್ರಹಿಸಿದ ಶ್ರೀಗಳು ರಾಮ ಪೂಜಕರಾದ ಪೂಜ್ಯ ರಾಘವೇಶ್ವರಭಾರತೀ ಶ್ರೀಗಳು ಶಿವಸೇವೆಗೆ ಸನ್ನದ್ಧರಾಗುವ ಸಂಕಲ್ಪವನ್ನು ಸ್ವತಃ ಶಿವನೇ ಮಾಡಿಸಿದ್ದಾನೆ. ಶ್ರೀಗಳಿಂದಾಗಿ ಗೋಕರ್ಣ ಸುವರ್ಣವಾಗುತ್ತಿದೆ. ಪರಮಾತ್ಮನಿಗೆ ಜಾತಿ, ಮತ, ಪಂಥಗಳ ಯಾವ ಕಟ್ಟುಪಾಡೂ ಇಲ್ಲ. ಆತ ಪ್ರೀತಿ, ಶ್ರದ್ಧೆಗಳಿಗೆ ಮಾತ್ರ ಲಭ್ಯ ಎಂದು ಹೇಳಿದ್ದರಲ್ಲದೇ ಸ್ವತಃ ತಾವೇ ರಚಿಸಿದ ಚೌಪದಿಗಳನ್ನು ಹಾಡಿ, ಬದುಕಿನಲ್ಲಿ ಪರಮಾತ್ಮನ ಸ್ಥಾನವನ್ನು ವಿಶದೀಕರಿಸಿದ್ದಾರೆ.

ಮರಣೋತ್ತರವಾಗಿ ಯಕ್ಷಗಾನ ದಿಗ್ಗಜ ಕೆರೆಮನೆ ಶಂಭು ಹೆಗಡೆಯವರಿಗೆ ನೀಡಲಾದ ’ಸಾರ್ವಭೌಮ ಸಮ್ಮಾನ’ವನ್ನು ಸ್ವೀಕರಿಸಿದ ಅವರ ಪುತ್ರ ಶಿವಾನಂದ ಹೆಗಡೆಯವರು ನನ್ನ ತಂದೆಯವರಿಗೆ ಈ ಪೀಠದಲ್ಲಿ ತುಂಬಾ ಶ್ರದ್ಧೆ ಮತ್ತು ಭಕ್ತಿ ಇತ್ತು. ಶ್ರೀಗಳ ಗೋ ರಕ್ಷಣಾ ಕಾರ್ಯವನ್ನು ಬಹಳವಾಗಿ ಪ್ರಶಂಸಿಸುತ್ತಿದ್ದವರು. ಇದೊಂದು ಅಸಾಧಾರಣ ಕ್ರಾಂತಿ ಎಂಬುದು ಅವರ ಆಶಯವಾಗಿತ್ತು. ಕಲೆಯ ವಿಷಯದಲ್ಲಿ ಎಂದೂ ರಾಜಿಮಾಡಿಕೊಳ್ಳಲಾದ ಅವರ ಆದರ್ಶ, ಶಿಸ್ತುಗಳಲ್ಲಿ ಬೆಳೆದ ನಾನು ಅವರಿಗೆ ನುಡಿಯಲ್ಲಿ ನಮನ ಸಲ್ಲಿಸದೇ ನಡೆಯ ಮೂಲಕವೇ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದರು. ಅಲ್ಲದೇ ಅವರ ಕಲಾರಾಧನೆಯನ್ನು ನಮ್ಮ ಕುಟುಂಬ ಮುಂದುವರೆಸಿಕೊಂಡು ಹೋಗುತ್ತದೆ ಮತ್ತು ಅವರು ನಮ್ಮೊಡನಿದ್ದು ಈ ಪ್ರಶಸ್ತಿ ಸ್ವೀಕರಿಸಿದ್ದರೆ ತನ್ನ ಜನ್ಮ ಪಾವನವೆಂದು ಅಂದುಕೊಳ್ಳುತ್ತಿದ್ದರು. ಎಂದು ಹೇಳುತ್ತಾ ಬಹಳ ಭಾವುಕರಾಗಿ ಮನದಾಳದ ಭಾವನೆಗೆ ಭಾಷೆ ಕೊಟ್ಟರು.

ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಯಾರಿಗೂ, ಯಾವಕಾಲಕ್ಕೂ ಭಯೋತ್ಪಾದನೆ, ಅಶಾಂತಿ ಮೊದಲಾದವುಗಳು ಒಳ್ಳೆಯದನ್ನು ಮಾಡಿಲ್ಲ. ’ವಸುಧೈವ ಕುಟುಂಬಕಂ’ ಎಂಬ ಅತ್ಯಪೂರ್ವ ಸಂದೇಶವನ್ನು ಮೊದಲು ನೀಡಿದ್ದು ನಮ್ಮ ಭಾರತ. ಇದನ್ನು ಅರ್ಥಮಾಡಿಕೊಂಡು ನಡೆದರೆ ಸಮಾಜಕ್ಕೆ ಸಹಜವಾಗಿಯೇ ಶಾಂತಿ ದೊರೆಯುತ್ತದೆ. ಸಮಾಜ ಎಂಬ ಮರದ ಬೇರು ಧರ್ಮದಲ್ಲಿದೆ. ಬೇರಿಗೆ ನೀರೆರೆದರೆ ಮಾತ್ರ ಸುಂದರವಾದ ಹೂವು ಹಣ್ಣುಗಳನ್ನು ಪಡೆಯಬಹುದು. ಬೇರೊಣಗಿದರೆ ಮರ ಸಾಯುತ್ತದೆ. ಇಂತಹ ಸಮಾಜ ವೃಕ್ಷಕ್ಕೆ ರಾಘವೇಶ್ವರ ಶ್ರೀಗಳು ಧರ್ಮವೆಂಬ ಸಿಂಚನ ಮಾಡಿ ವಿಶ್ವವನ್ನು ಪೋಷಿಸುತ್ತಿದ್ದಾರೆ ಎಂದು ನುಡಿದರು.

ಪತ್ರಕರ್ತ ಬಾಬು ಕೃಷ್ಣಮೂರ್ತಿಯವರು ಭಾರತೀಯ ಸಂಸ್ಕೃತಿಗೆ ಎಂದೂ, ಯಾವ ಲೋಪವೂ ಆಗದು. ಅದು ಅವಿನಾಶಿ. ಗೋ ರಕ್ಷಣೆ, ರಾಮಾಯಣ ಮಹಾಸತ್ರ ಮೊದಲಾದ ಎಲ್ಲ ಕಾರ್ಯಕ್ರಮಗಳೂ ಸಂಸ್ಕೃತಿ ಪೋಷಕವಾದ ಕಾರ್ಯಗಳು ಎಂದು ಅಭಿಪ್ರಾಯಪಟ್ಟರು.

ರಾಘವೇಶ್ವರ ಶ್ರೀಗಳವರು ಗಾಳಿ ಎಲ್ಲೆಡೆಯಿದ್ದರೂ ನಮ್ಮ ವಿಶೇಷ ಉಪಯೋಗಕ್ಕೆಂಬಂತೆ ಪಂಖವನ್ನು ಹಾಕಿಕೊಂಡ ಹಾಗೆ ಪರಮಾತ್ಮನ ಸಾನ್ನಿಧ್ಯಕ್ಕೆ ಮಂದಿರ ಬರಬೇಕು. ಕೆಲವು ವಿಶಿಷ್ಟ ಕ್ಷೇತ್ರಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಭಗವಂತನ ಸಾನ್ನಿಧ್ಯ ಅತಿಶಯವಾಗಿರುತ್ತದೆ. ಶಿವರಾತ್ರಿ ಅಂತಹುದೇ ಒಂದು ಪರ್ವ. ಇಂದು ರಥೋತ್ಸವ. ಗರ್ಭಗುಡಿಯೊಳಗಿರುವ ದೇವರು ರಥವನ್ನೇರಿ ಜನರಿಗೆ ತನ್ನನ್ನು ತೆರೆದುಕೊಳ್ಳುತ್ತಾನೆ. ಈ ಸಂದರ್ಭವನ್ನು ನೋಡದೇ ಕಣ್ಣು ಮುಚ್ಚಿಕೊಂಡರೆ ಅದು ನಮ್ಮ ತಪ್ಪೇ ಹೊರತು ಈಶ್ವರನದಲ್ಲ. ಇಂದು ರಥೋತ್ಸವದಲ್ಲಿ ಶಿವನನ್ನು ಕುಳ್ಳಿರಿಸದ ಹಾಗೆ ನಮ್ಮ ಬದುಕಿನ ರಥದಲ್ಲಿ ಶಿವನನ್ನು ಪ್ರತಿಷ್ಠಾಪಿಸೋಣ. ಜೀವನ ರಥವನ್ನು ಎಳೆಯೋಣ ಎಂದು ನುಡಿದರು.

ಗೋಕರ್ಣ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಭಾರತೀ ದೇವತೆ, ಉದ್ಯಮಿ ಎಂ.ಎನ್. ಭಟ್ ಮದ್ಗುಣಿ, ಚಲನಚಿತ್ರ ನಟ ಸುರೇಶ್ ಒಬೆರಾಯ್ ಶಿವ ಸಂದೇಶವನ್ನಿತ್ತರು.

---------------------------------------------------------------------------------------------------------------------------------------------------------------------------------------

Leave a Reply