ಮುಖಪುಟ >> ಮಹಾ ಶಿವರಾತ್ರಿ

ಭಾವ ಸಂವೇದನೆ ವ್ಯಕ್ತಿಯ ನೈಜ ರೂಪ : ಶ್ರೀ ರಾಘವೇಶ್ವರ ಶ್ರೀ

..................................................................................................................................................

ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೨೧ ಮನುಷ್ಯ ಎಲ್ಲ ರೀತಿಯಿಂದಲೂ ಬೆಳೆಯಬೇಕು. ಸಾಹಿತ್ಯದಿಂದ ಹೃದಯ ಅರಳುತ್ತದೆ. ಬದುಕಿಗೆ ಅಗತ್ಯವಾದ ಭಾವ ಸಾಹಿತ್ಯದ ಕೊಡುಗೆ. ಭಾವ ಸಂವೇದನೆಯೇ ವ್ಯಕ್ತಿಯ ನೈಜ ರೂಪ ಎಂದು ರಾಘವೇಶ್ವರ ಶ್ರೀಗಳು ಹೇಳಿದರು.


ಇಂದಿಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೋಕರ್ಣ ಘಟಕವನ್ನು ಶುಭಾರಂಭಗೊಳಿಸಿ ಮಾತನಾಡಿದ ಅವರು ಈ ಘಟಕದಿಂದ ಸಮಾಜೋಪಯೋಗಿಯಾದ ಸಾಹಿತ್ಯ ಕಾರ್ಯಗಳು ನಿರಂತರವಾಗಿ ಆಯೋಜಿತವಾಗಲಿ ಎಂದು ಆಶೀರ್ವದಿಸಿದರು.

ಗೋಕರ್ಣ ಕನಡ ಸಾಹಿತ್ಯ ಪರಿಷತ್ತಿನ ಉದ್ಘಾಟನೆ

ಗೋಕರ್ಣ ಕನಡ ಸಾಹಿತ್ಯ ಪರಿಷತ್ತಿನ ಉದ್ಘಾಟನೆ

ಈ ಸಂದರ್ಭದಲ್ಲಿ ಸಾಹಿತಿ, ವಿಚಾರವಾದಿ ಬಿ.ಎ. ಸನದಿ ಕನ್ನಡ ಸಾಹಿತ್ಯ ಹಲವಾರು ಖ್ಯಾತ ಕವಿಗಳ ಕೊಡುಗೆಯಿಂದ ಸಮೃದ್ಧವಾಗಿದೆ. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರಕಾಶಪಡಿಸುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಕವಿಗಳು, ಸಾಹಿತಿಗಳು ನೆರೆ ರಾಜ್ಯಗಳಲ್ಲಿ ಮಾತ್ರವಲ್ಲದೇ ನೆರೆಯ ರಾಷ್ಟ್ರಗಳಲ್ಲಿಯೂ ಕಾವ್ಯದ ಕಂಪನ್ನು ಬೀರುತ್ತಿದ್ದಾರೆ. ಗೌರೀಶ ಕಾಯ್ಕಿಣಿಯವರು ನಾಡಿನ ಹಲವು ಕವಿಗಳ ಕಣ್ಣನ್ನು ತೆರೆಸಿದ ಸಾಹಿತಿ ಎಂದು ಅಭಿಪ್ರಾಯಪಟ್ಟರು.


ಭಾರತೀಯ ಸಾಹಿತ್ಯದ ಜತೆಗೆ ದೇಶಗಳ ಉತ್ತಮ ಸಾಹಿತ್ಯವನ್ನು ವಿಮರ್ಷಾ ಪದ್ಧತಿಗಳನ್ನು ಆಳವಾಗಿ ಅಧ್ಯಯನ ಮಾಡಿದ ಗೌರೀಶರಿಗೆ ಸಲ್ಲಬೇಕಾದ ಗೌರವ ಅವರ ಕಾಲದಲ್ಲಿ ದೊರೆಯಲಿಲ್ಲ. ಆದರೆ ಇಂದು ಸಾರ್ವಭೌಮ ಪ್ರಶಸ್ತಿ ಅವರನ್ನು ಅರಸಿ ಬಂದಿರುವುದು ಸಂತಸದ ವಿಷಯ ಎಂದು ಹೇಳಿದರು.

ತಾಲೂಕು ಕ.ಸ.ಪ. ಅಧ್ಯಕ್ಷ ಎನ್.ಆರ್. ಗಜು ಪ್ರಾಸ್ತಾವಿಕವಾಗಿ ಮಾತನಾಡಿ ಗೋಕರ್ಣ ಅಧ್ಯಾತ್ಮ ಸಾಹಿತ್ಯಕ್ಕೆ ಪ್ರಸಿದ್ಧವಾದಂತೆ ವೈಚಾರಿಕ ಸಾಹಿತ್ಯಕ್ಕೂ ಪ್ರಸಿದ್ಧ. ಗೌರೀಶ ಕಾಯ್ಕಿಣಿಯವರ ಪ್ರಖರ ಬೌದ್ಧಿಕ ಸಾಹಿತ್ಯದ ಜತೆ ಧಾರ್ಮಿಕ ಸಾಹಿತ್ಯವೂ ಒಂದುಗೂಡಿ ಸಮನ್ವಯ ರೀತಿಯಲ್ಲಿ ಪೂರಕವಾಗಿ ಸಾಗಿವೆ ಎಂದು ಹೇಳಿದರು. ನಂತರ ಅವರು ಘಟಕದ ನಿಯೋಜಿತ ಅಧ್ಯಕ್ಷ ವಿಠ್ಠಲ್ ಪೇರುಮನೆಯವರಿಗೆ ಪರಿಷತ್ತಿನ ಧ್ವಜವನ್ನು ಹಸ್ತಾಂತರಿಸಿದರು. ಶ್ರೀ ವಿಠ್ಠಲ ಪೇರುಮನೆಯವರು ಗೌರೀಶ ಕಾಯ್ಕಿಣಿಯವರಿ ಸಾರ್ವಭೌಮ ಪ್ರಶಸ್ತಿಯನ್ನು ನೀಡುವ ಸಮಯದಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ತಿನ ಗೋಕರ್ಣ ಘಟಕದ ಉದ್ಘಾಟನೆ ಆಗಿರುವುದು ಸಾಹಿತ್ಯಾಸಕ್ತರಿಗೆ ತುಂಬ ಸಂತೋಷದ ಸಂಗತಿ ಎಂದು ನುಡಿದು, ಧನ್ಯವಾದ ಸಲ್ಲಿಸಿದರು. ಉಷಾ ಶಂಕರಲಿಂಗ ಇವರಿಂದ ಸರಸ್ವತಿ ಪ್ರಾರ್ಥನೆ ನಡೆಯಿತು.

---------------------------------------------------------------------------------------------------------------------------------------------------------------------------------------

Leave a Reply