ಮುಖಪುಟ >> ಮಹಾ ಶಿವರಾತ್ರಿ

ಶಿವರಾತ್ರಿಯ ಸಮಾರೋಪ ಹಲವು ಹೊಸತುಗಳಿಗೆ ನಾಂದಿಯಾಗಲಿದೆ : ರಾಘವೇಶ್ವರ ಶ್ರೀ

..................................................................................................................................................

ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೨೬ – ಪ್ರತಿಯೊಂದು ರಾತ್ರಿಯೂ ಶುಭ ಮುಂಜಾವಿನ ಪೂರ್ವರಂಗ.

ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಜಿಯವರ ಆಶೀರ್ವಚನ

ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಜಿಯವರ ಆಶೀರ್ವಚನ

ಅಂತೆಯೇ ಶಿವರಾತ್ರಿಯ ಈ ಪರ್ವವು ಸಹ ಎಷ್ಟೋ ಕಾಲದಿಂದ ಅವ್ಯವಾಗಿದ್ದ ಆತ್ಮಲಿಂಗ ಸ್ವರೂಪಿಯಾದ ಶಿವ ತನ್ನ ವಿರಾಟ್ ಸ್ವರೂಪವನ್ನು ತೋರಿಸಿದ್ದಾನೆ. ’ಹರಹರ ಮಹಾದೇವ’ ಎಂಬ ಘೋಷಣೆಯಲ್ಲಿ ಉಳಿದೆಲ್ಲ ಶಬ್ದಗಳು ಮುಚ್ಚಿ ಹೋದವು ಎಂದು ಶ್ರೀ ರಾಘವೇಶ್ವರಭಾರತೀ ಶ್ರೀಗಳು ಮಹಾಶಿವರಾತ್ರಿ ಮಹೋತ್ಸವದ ಸಮಾರೋಪ ಸಭೆಯಲ್ಲಿ ನುಡಿದರು.

ಇದು ಶಿವರಾತ್ರಿಯ ಸಮಾರೋಪ. ಆದರೆ ಹಲವು ಕಾರ್ಯಗಳ ಆರಂಭಕ್ಕೆ ನಾಂದಿ. ಫೆ.೨೭ರಂದು ಇಲ್ಲಿ ಗುರುಕುಲದ ಆರಂಭವಾಗುತ್ತಿದೆ. ಬರುವ ಮಾರ್ಚ್ ೮ರಂದು ಮಠದ ಮೂಲ ಅಶೋಕೆಯಲ್ಲಿ ಶ್ರೀಮಠದ ಮಲ್ಲಿಕಾರ್ಜುನ ಮಂದಿರದ ಜೀರ್ಣೋದ್ಧಾರ, ಆಂಜನೇಯನ ಜನ್ಮಸ್ಥಳದಲ್ಲಿ ದೇವಾಲಯ ನಿರ್ಮಾಣ, ಕೋಟಿರುದ್ರ ಕಾರ್ಯಕ್ರಮ, ಅಷ್ಟಬಂಧ ಈ ಎಲ್ಲವುಗಳ ಆರಂಭಕ್ಕೆ ಈ ಸಮಾರೋಪ ಸೋಪಾನವಾಗಲಿದೆ ಎಂದರು. ಅದಲ್ಲದೇ ಆದಿಗೋಕರ್ಣ, ವೀರಭದ್ರ ದೇವಾಲಯಗಳ ನವೀಕರಣ ಕಾರ್ಯ ಒಟ್ಟೊಟ್ಟಿಗೇ ಪ್ರಾರಂಭವಾಗಲಿದೆ ಎಂದರು.

ಈ ಸಂಭ್ರಮದಲ್ಲಿ ನಾವು ಸಾಕ್ಷಿ ಮಾತ್ರ. ಎಲ್ಲ ಕೆಲಸವನ್ನು ಊರಿನ ಜನರು, ಕಾರ್ಯಕರ್ತರು ನಡೆಸಿದ್ದಾರೆ. ಎಲ್ಲರೂ ಸೇರಿ ಈ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯನ್ನು ಮಾಡಬೇಕಿದೆ. ಇದೀಗ ಪ್ರಾರಂಭಗೊಂಡ ಪರಿವರ್ತನೆಯ ಹೊಸಗಾಳಿ, ಹೊಸಶಕೆಯೊಂದನ್ನು ಸ್ಥಾಪಿಸಿದೆ. ಈ ಬದಲಾವಣೆ ಜನರಿಗೇ ಕಲ್ಯಾಣವನ್ನುಂಟುಮಾಡಲಿ ಎಂದು ಪೂಜ್ಯ ಶ್ರೀಗಳು ಹಾರೈಸಿದರು.

ಸಂಸದ ಅನಂತಕುಮಾರ ಹೆಗಡೆ ಶಿವಸಂದೇಶ ನೀಡುತ್ತಾ ಶಿವಮಯವಾದ ಈ ಗೋಕರ್ಣ ಕ್ಷೇತ್ರದಲ್ಲಿ ಇದೇ ಮೊದಲಬಾರಿಗೆ ಅಚ್ಚುಕಟ್ಟಾಗಿ, ತುಂಬ ವ್ಯವಸ್ಥಿತವಾಗಿ, ವೈಭವಯುತವಾಗಿ ಶಿವರಾತ್ರಿ ಉತ್ಸವ ನಡೆದಿದೆ. ಇದು ಗೋಕರ್ಣದ ಕೀರ್ತಿಯನ್ನು, ಶೋಭೆಯನ್ನು ಹೆಚ್ಚಿಸುವಂತಹುದು. ಗೋಕರ್ಣಕ್ಕೆ ಹಿಂದಿನ ಹಿರಿಮೆ, ಗರಿಮೆಗಳನ್ನು ಪಡೆಯಬೇಕೆಂಬ ಆಕಾಂಕ್ಷೆ ಸಮಾಜದ್ದು. ಅಂತಹ ನಿರೀಕ್ಷೆಯತ್ತ ಮೊದಲ ಹೆಜ್ಜೆ ಪ್ರಾರಂಭವಾಗಿದೆ. ಇದು ತುಂಬ ಸಂತೋಷದ ಸಂಗತಿ. ಪೂಜ್ಯ ಶ್ರೀ ರಾಘವೇಶ್ವರ ಶ್ರೀಗಳ ಮಾರ್ಗದರ್ಶನ, ನೇತೃತ್ವದಲ್ಲಿ ಜಾಗತಿಕ ಸ್ತರದ ಪ್ರಸಿದ್ಧಿ ಗೋಕರ್ಣಕ್ಕೆ ದೊರಕಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಹೊಸದಿಗಂತ ಪತ್ರಿಕೆಯ ಪ್ರಧಾನ ಸಂಪಾದಕ ದು.ಗು. ಲಕ್ಷ್ಮಣ್ ಅವರು ಈ ನಂದಿಕೇಶ್ವರ ವೇದಿಕೆ ಒಂಭತ್ತು ದಿನಗಳಲ್ಲಿ ಹಲವು ಜಾತಿ, ಮತ, ಪಂಥಗಳ, ಸ್ವಾಮಿಗಳ, ಸಂತರ, ಗಣ್ಯರ ಸಮನ್ವಯಕ್ಕೆ ಸಾಕ್ಷಿಯಾಗಿದೆ. ಇಬ್ರಾಹಿಂ ಸುತಾರಾರಂತಹ ಸೂಫಿ ಸಂತರೂ ಇಲ್ಲಿದ್ದಾರೆ. ಜೊತೆಗೆ ಉಳಿದ ಮಠಗಳ ಪೀಠಾಧೀಶರೂ ಇದ್ದಾರೆ. ಇದು ಸಾಮರಸ್ಯದ ದೃಷ್ಟಿ. ಪೂಜ್ಯ ಶ್ರೀಗಳು ತಮ್ಮ ಹೃತ್ಪೂರ್ವಕ ಪ್ರೀತಿಯಿಂದಲೇ ಎಲ್ಲರನ್ನೂ ಗೆದ್ದಿದ್ದಾರೆ. ಅವರು ಯಾವ ಕಾರ್ಯಕ್ರಮವನ್ನು ಹಾಕಿಕೊಂಡರೂ ಅದರಲ್ಲಿ ಸಮಾಜಕ್ಕೆ ಅಗತ್ಯವಾದ ಗುಣಾತ್ಮಕವಾದ ಬದಲಾವಣೆಯನ್ನು ಹೊಂದಿದ ಹೊಸತನ ಇದ್ದೇ‌ಇರುತ್ತದೆ. ಕಟ್ಟುವುದು ಅವರ ಸ್ವಭಾವ. ಸಮಾಜ ಮುಖಿಯಾದ ಚಿಂತನೆ ಆಗಬೇಕೆಂಬುದೇ ಇಂದಿನ ಶಿವಸಂದೇಶ. ನಮ್ಮ ಸಮಾಜದ ಮೇಲೆ ನಡೆಯುತ್ತಿರುವ ಸಾಂಸ್ಕೃತಿಕ ಧಾಳಿಯನ್ನು ತಡೆಯಬೇಕಿದೆ. ಸಶಕ್ತ ಸಮುದಾಯವನ್ನು ಕಟ್ಟಬೇಕಿದೆ. ಈ ವೇದಿಕೆ ಅದಕ್ಕೆ ಶ್ರೀಕಾರ ಹಾಕಿದೆ ಎಂದು ಹೇಳಿದರು.

ಭಾ.ಜ.ಪಾ.ದ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ವಿನೋದ ಪ್ರಭು ಗುರು ಸಮಾಜಕ್ಕೆ ಮಾರ್ಗದರ್ಶನ ನೀಡಿ, ಸನ್ಮಾರ್ಗದಲ್ಲಿ ನಡೆಸುವವರು. ಸ್ವಾರ್ಥವನ್ನು ತ್ಯಜಿಸಿ, ಪರಹಿತವನ್ನು ಜಯಿಸಿ ಜೀವಿಸುವಂತಹ ಸ್ವಭಾವವನ್ನು ನಮ್ಮಲ್ಲಿ ಮೂಡಿಸಿ ಬದುಕನ್ನು ಸಾರ್ಥಕಗೊಳಿಸುತ್ತಾರೆ ಎಂದು ನುಡಿದರು.

ಚಲನಚಿತ್ರನ ನಟ ಸುರೇಶ್ ಒಬೆರಾಯ್ ಸುಂದರ ಕಥೆಗಳೊಂದಿಗೆ ಬದುಕಿನ ಸಾರ್ಥಕತೆಯನ್ನು ಪ್ರತಿಪಾದಿಸಿದರು.

ಗಂವ್ಹಾರದ ತ್ರಿವಿಕ್ರಮಾನಂದ ಸರಸ್ವತೀ ಮಠದ ಶ್ರೀ ಸೋಪಾನನಾಥ ಸ್ವಾಮಿಗಳು ಜಗತ್ತಿನಲ್ಲಿ ಆತ್ಮಲಿಂಗ ಒಂದೇ. ಶಿವನನ್ನು ತೋರಿಸುವ ಗುರುವೂ ಒಬ್ಬನೇ. ಅನೇಕ ಮಣಿಗಳ ಹಾರದಂತೆ ಇರುವ ರಾಘವೇಶ್ವರ ಶ್ರೀಗಳು ಶಿವ ದರ್ಶನವನ್ನು ಮಾಡಿಸಿದ್ದಾರೆ. ಗೋಸೇವೆಯನ್ನು ಶ್ರೀಗಳು ನಡೆಸುತ್ತಿರುವುದು ನಮ್ಮೆಲ್ಲರ ಭಾಗ್ಯ. ಲೋಕಪೀಡಕರವಾದ ಆಸುರೀ ಶಕ್ತಿಯನ್ನು ಮಟ್ಟಿನಿಂತ ಕ್ಷೇತ್ರ ಗೋಕರ್ಣ. ಸತ್ಯಧರ್ಮಕ್ಕೆ ಜಯ ಎಂಬುದನ್ನು ಸಾಕ್ಷೀಕರಿಸಿದೆ ಎಂದರು.

ಉದ್ಯಮಿ ಮುರಳೀಧರ ಪ್ರಭು ಉತ್ಸವದ ಸಮಗ್ರ ಅವಲೋಕನ ಮಾಡುತ್ತ ಈ ಒಂಭತ್ತು ದಿನಗಳ ನವರಾತ್ರಿಯ ಶುಭಸಂದೇಶವನ್ನು, ಶಿವಪ್ರಸಾದವನ್ನು ನಾವು ಸ್ವೀಕರಿಸಬೇಕಿದೆ. ಮಹಾ ಸಂಕಲ್ಪ ದಿನದಂದು ಶ್ರೀಗಳು ಈ ದೇವಾಲಯವನ್ನು ಲೋಕಾರ್ಪಣೆ ಮಾಡುವುದಾಗಿ ಹೇಳಿದ್ದರು. ಉತ್ಸವದಲ್ಲಿ ಪಾಲ್ಗೊಂಡ ಜನರನ್ನು ನೋಡಿದಾಗ ಈ ಮಾತಿನ ಸತ್ಯಾಸತ್ಯತೆ ಗೋಚರಿಸಿತು. ಇದೊಂದು ವಿಶಿಷ್ಟ ವೇದಿಕೆ. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಧರ್ಮಸಭೆ ಮೊದಲಾದ ಹಲವು ಹೊಸತುಗಳ ಆಯೋಜನೆ ನಡೆದಿದೆ. ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಈ ಶಿವರಾತ್ರಿ ನಿಲ್ಲಲಿದೆ ಎಂದು ಹೇಳಿದರಲ್ಲದೇ ಈ ಒಂಭತ್ತು ದಿನಗಳ ಕಾಲ ನಡೆಸಿದ ಅಖಂಡ ಭಜನೆ, ಅಮೃತಾನ್ನ ಮೊದಲಾದ ವಿಭಾಗಗಳಲ್ಲಿ ಅವಿಶ್ರಾಂತವಾಗಿ ದುಡಿದ ಎಲ್ಲ ಕಾರ್ಯಕರ್ತರ ಸೇವೆಯನ್ನು ಕೃತಜ್ಞತಾ ಭಾವದಿಂದ ಸ್ಮರಿಸಿದರು.

ಈ ಅರ್ಥಪೂರ್ಣ ಸಮಾರೋಪ ಸಭೆಯನ್ನು ಬೆಂಗಳೂರಿನ ಉದ್ಯಮಿ ಎಂ.ಎನ್. ಭಟ್ ಮದ್ಗುಣಿ ಪೂಜೆ ಮಾಡಿ, ಸ್ವಾಗತಿಸಿದರು.

---------------------------------------------------------------------------------------------------------------------------------------------------------------------------------------

Leave a Reply