ಮುಖಪುಟ >> ಮಹಾ ಶಿವರಾತ್ರಿ

ಗೋಕರ್ಣ : ನಾಲ್ಕು ದಿಕ್ಕು, ನೂರು ಧ್ವನಿ

..................................................................................................................................................

ಗೋಕರ್ಣ, ಫೆ.೨೬ – ಮಹಾಶಿವರಾತ್ರಿ ಉತ್ಸವ ವಿಧ್ಯುಕ್ತವಾಗಿ ಮಂಗಲವನ್ನು ಕಂಡಿದೆ. ಗೋಕರ್ಣದ ಮಟ್ಟಿಗೆ ಈ ಒಂಭತ್ತು ದಿನಗಳ ಉತ್ಸವ ಹೊಚ್ಚಹೊಸತು. ಇಲ್ಲಿಯವರೆಗೆ ವಾರ್ಷಿವಾಗಿ ಒಂಭತ್ತು ದಿನಗಳ ಉತ್ಸವ ನಡೆಯುತ್ತಿತ್ತಾದರೂ ಈ ರೀತಿಯ ಸಂಭ್ರಮ ಇರಲಿಲ್ಲ.

ಗೋಕರ್ಣದ  ಶಿವರಾತ್ರಿಯ ವಿಶೇಷ ವಿವರಗಳು

ಗೋಕರ್ಣದ ಶಿವರಾತ್ರಿಯ ವಿಶೇಷ ವಿವರಗಳು


ಧರ್ಮಸಭೆ, ಸಾರ್ವಭೌಮ ಪ್ರಶಸ್ತಿಯ ಮುಖಾಂತರ ನಾಡು, ನುಡಿ, ನಡೆಗೆ ಅಪ್ರತಿಮ ಸೇವೆ ಸಲ್ಲಿಸಿದವರಿಗೆ ಪುರಸ್ಕಾರ, ಗಂಗಾ ಜಲಾಭಿಷೇಕ, ಸಾಂಸ್ಕೃತಿಕ ಸಂಜೆ ಇವೆಲ್ಲವೂ ಈ ಶಿವರಾತ್ರಿಯ ಹೊಸತನ.

ಸಾಮಾನ್ಯವಾಗಿ ರಾಮಚಂದ್ರಾಪುರಮಠದ ಕಾರ್ಯಕ್ರಮವೆಂದರೆ ಸಾಕು ಏನೋ ನಾವೀನ್ಯತೆ ಇದ್ದೇ ಇರುತ್ತದೆ ಎಂಬಷ್ಟರ ಮಟ್ಟಿಗೆ ಶ್ರೀಮಠದ ಆಯೋಜನೆಗಳು ಹೆಸರುವಾಸಿಯಾಗಿವೆ. ಈ ಹಿನ್ನೆಲೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡ ಹಲವಾರು ಭಕ್ತರನ್ನು, ಯಾತ್ರಿಕರನ್ನು ಮಾಧ್ಯಮ ಕೇಂದ್ರ ಮಾತಿಗೆಳೆದಾಗ ಬಂದ ಪ್ರತಿಕ್ರಿಯೆಗಳು ಇಂತಿವೆ.

ಇಲ್ಲಿಗೆ ಮಹಾಬಲನ ಅರ್ಚನೆಗೆಂದೇ ಬಂದವರು, ಉತ್ಸವದ ಸೊಬಗನ್ನು ಸವಿಯಲೆಂದು ಬಂದವರು, ಶ್ರೀಮಠದ ಆಡಳಿತ ನಿರ್ವಹಣೆಯಲ್ಲಿನ ಮೊದಲ ಶಿವರಾತ್ರಿಯನ್ನು ಕಾಣಬಂದವರು ಹೀಗೆ ಎಲ್ಲ ಆಶೋತ್ತರಗಳ ಜನಸಾಗರ ಗೋಕರ್ಣದತ್ತ ಮುಖಮಾಡಿತ್ತು.

ದೂರದ ಬೆಳಗಾವಿಯ ಕಡೆಯಿಂದ ಬಂದ ಸಿದ್ದಪ್ಪ ಬಡಿಗೇರ ’ಈ ಸಲ ಜನ ಜಾಸ್ತಿಯಲ್ರೀ, ಹಾಂಗಾಗಿ ಕ್ಯೂನಲ್ಲಿ ತುಂಬ ಹೊತ್ತು ಕಾಯ್ಬೇಕಿತ್ರೀ. ಆದ್ರೂ ದೇವರ ದರ್ಶನ ಆತ್ನೋಡ್ರಿ’ ಅಂತ ಹೇಳ್ತಾರೆ.

ಗುಲ್ಬರ್ಗದ ಮಹಾಂತೇಶ ’ನಾವಂತೂ ಕಾಶಿಗೆ ಎಂದ್ ಹೋಗ್ತೀವೋ ಗೊತ್ತಿಲ್ಲ ನೋಡ್ರಿ, ಆದ್ರೂ ಗಂಗಾ ಜಲದಿಂದ ಅಭಿಷೇಕ ಮಾಡೋ ವ್ಯವಸ್ಥಿ ಅಗ್ದೀ ಚಲೋ ಅದಾ’.

ಉಡುಪಿಯ ಶ್ರೀನಿವಾಸ ಹೆಬ್ಬಾರರಿಗೆ ಒಂಭತ್ತು ದಿನಗಳ ಕಾಲ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ತುಂಬ ಖುಷಿಕೊಟ್ಟವಂತೆ. ಅದರಲ್ಲಿಯೂ ಇಬ್ರಾಹಿಂ ಸುತಾರಾರ ’ಅಧ್ಯಾತ್ಮ ಸಂವಾದ ತರಂಗಿಣಿ’ಯ ನೀತಿ, ಕಥೆ, ಸಂವಾದ, ಗೀತ, ಹಾಸ್ಯಗಳ ಪಂಚಾಮೃತ ಹೃದಯಕ್ಕೇ ನಾಟಿತು ಎಂದು ಹೇಳುವುದನ್ನು ಮರೆಯಲಿಲ್ಲ.

ಸಾಗರದ ಸುಬ್ರಹ್ಮಣ್ಯ ಭಟ್ ಕೇಶವ ಹೆಗಡೆ ಇವರಿಗೆ ಧರ್ಮಸಭೆಯಲ್ಲಿ ನಾಡು ನುಡಿಗೆ ಸೇವೆಗೈದ ಗಣ್ಯರಿಗೆ ’ಸಾರ್ವಭೌಮ ಸಮ್ಮಾನ’ದಿಂದ ಗೌರವಿಸಿದ್ದು ಧನ್ಯತೆಯನ್ನು ಭಾವಿಸುವಂತಾಗಿದೆ.

ಒಟ್ಟಾರೆಯಾಗಿ ಬಂದೆಲ್ಲ ಭಕ್ತರಿಗೆ ಕೊಡಮಾಡಿದ ಉಚಿತ, ಶಿಸ್ತುಬದ್ಧ ಅಮೃತಾನ್ನ ಭೋಜನ ವ್ಯವಸ್ಥೆ ಮತ್ತು ಅದಕ್ಕಾಗಿ ಹಗಲು ರಾತ್ರಿಗಳೆನ್ನದೇ ಅವಿರತವಾಗಿ ದುಡಿದ ಶಿವಸೇವಕರು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಾರ್ಯಕ್ರಮದ ಆಯೋಜನೆಯ ಹಿನ್ನೆಲೆ, ಶೈಲಿ, ಅದು ಎಲ್ಲರನ್ನೂ ತನ್ನೆಡೆಗೆ ಬರಮಾಡಿಕೊಂಡು, ತನ್ನಲ್ಲಿ ಸೆಳೆದುಕೊಂಡ ರೀತಿಯನ್ನು ಬಣ್ಣಿಸಲು ಮಾತುಗಳಿಲ್ಲವಾಗಿವೆ.

---------------------------------------------------------------------------------------------------------------------------------------------------------------------------------------

Leave a Reply