ಮುಖಪುಟ >> ಮಹಾ ಶಿವರಾತ್ರಿ

ಬದುಕಿನ ಸರಳ ಸಂತೋಷಗಳನ್ನು ಕಳೆದುಕೊಳ್ಳುತ್ತಿದ್ದೇವೆ : ಜಯಂತ ಕಾಯ್ಕಿಣಿ

..................................................................................................................................................

ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೨೧ ಇಂದಿನ ಯಾಂತ್ರಿಕ ಯುಗದಲ್ಲಿ ಮನುಷ್ಯ ಸಹಜವಾದ ತಾಯ್ತನದ ತುಡಿತ, ಹಸುಗೂಸಿನ ಬೆರಗು, ಎರಡನ್ನೂ ನಾವು ನಿಧಾನವಾಗಿ ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಬದುಕಿನಲ್ಲಿ ಹಣವೇ ಮುಖ್ಯ ಮೂಲ್ಯವಾಗಿ ನಮ್ಮ ಸಂಸ್ಕೃತಿಯ ಮಮತೆ, ಸಮತೆಯ ಬಂಧ ಸಡಿಲವಾಗಿದೆ. ಹಣದ ಹಿಂದೆ ಧಾವಿಸುವ ನಮ್ಮ ಪ್ರವೃತ್ತಿಯಿಂದಾಗಿ ಜೀವನದ ಸರಳ ಸಂತೋಷಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಖ್ಯಾತ ಕವಿ, ಸಾಹಿತಿ ಜಯಂತ ಕಾಯ್ಕಿಣಿ ಹೇಳಿದ್ದಾರೆ.

ದಿ.ಗೌರೀಶ ಕಾಯ್ಕಿಣಿ ಅವರಿಗೆ ಸಾರ್ವಭೌಮ ಸಮ್ಮಾನ ಪುರಸ್ಕಾರ

ದಿ.ಗೌರೀಶ ಕಾಯ್ಕಿಣಿ ಅವರಿಗೆ ಸಾರ್ವಭೌಮ ಸಮ್ಮಾನ ಪುರಸ್ಕಾರ

ಇಂದು ಸಾಗರ ಸಂಗಮದ ನಂದಿಕೇಶ್ವರ ವೇದಿಕೆಯಲ್ಲಿ ನಡೆದ ಧರ್ಮ ಸಭೆಯಲ್ಲಿ ನಾಡಿನ ಖ್ಯಾತ ಚಿಂತಕ, ವಿಚಾರವಾದಿ ದಿ. ಡಾ. ಗೌರೀಶ ಕಾಯ್ಕಿಣಿಯವರಿಗೆ ಶ್ರೀ ಮಹಾಬಲೇಶ್ವರ ದೇವಾಲಯದಿಂದ ನೀಡಲಾದ ಮರಣೋತ್ತರ ಸಾರ್ವಭೌಮ ಪ್ರಶಸ್ತಿಯನ್ನು ಶ್ರೀ ರಾಘವೇಶ್ವರಭಾರತೀ ಶ್ರೀಗಳಿಂದ ಸ್ವೀಕರಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು ತಂದೆ ಗೌರೀಶ ನನಗೆ ಆದರ್ಶ ರೂಪವಾಗಿದ್ದಾರೆ. ಗೋಕರ್ಣವನ್ನೇ ಜಗತ್ತನ್ನಾಗಿ ಕಾಣದೇ ವಿಶ್ವದೆಲ್ಲೆಡೆ ಗೋಕರ್ಣವನ್ನು ಕಂಡರು. ಜಗತ್ತಿನೆಲ್ಲೆಡೆಯಿಂದ ಶ್ರೇಷ್ಠ ವಿಚಾರಧಾರೆಗಳನ್ನು ಸಂಗ್ರಹಿಸಿದ ಅವರು ಮಾನವನಲ್ಲಿ ಮಾಧವನನ್ನು ಕಂಡರು. ಇಂತಹ ತಂದೆಯು ಒಮ್ಮೆ ನನ್ನ ಹೆಗಲಿಗೆ ಭಾರ ಎನಿಸಿದ ದಿನಗಳೂ ಇದ್ದವು ಎಂದು ಹೇಳಿದ ಜಯಂತ ಕಾಯ್ಕಿಣಿ ನನ್ನ ಬಾಲ್ಯದ ಗೋಕರ್ಣದ ಶಿವರಾತ್ರಿ ಅದ್ಭುತ ಅನುಭವಗಳ ಸಂತೆ. ಇಂತಹ ಸಂವೇದನೆಗಳಿಂದಲೇ ಕಥೆ, ಕಾವ್ಯ, ಕಣ್ತೆರೆಯಿತು ಎನ್ನುತ್ತಾ ತನ್ನ ಎಳೆತನದ ನೆನಪುಗಳನ್ನು ಮೆಲುಕು ಹಾಕಿದರಲ್ಲದೇ ಈ ಪ್ರಶಸ್ತಿ ಗೌರೀಶರಿಗೆ ಸಲ್ಲುವುದಕ್ಕಿಂತ ಅವರು ಪ್ರತಿನಿಧಿಸಿದ ಮೌಲ್ಯಗಳಿಗೆ ಸಂದ ಗೌರವ. ಪೂಜ್ಯ ಶ್ರೀ ರಾಘವೇಶ್ವರರಲ್ಲಿ ಆಪ್ತತೆ, ಪೂಜ್ಯತೆ ಎರಡೂ ಇವೆ. ಶ್ರೀಗಳು ಗೋಕರ್ಣದಲ್ಲಿ ಬದಲಾವಣೆಯನ್ನು ತರುತ್ತಿದ್ದಾರೆ. ಪರಿವರ್ತನೆಯ ಕಾಲದಲ್ಲಿ ಸಂಘರ್ಷವಿರುವುದು ಸಹಜ. ಮಾಡುವ ಕಾರ್ಯವನ್ನು ಪ್ರೀತಿಯಿಂದ ಮಾಡಿದಾಗ ಎಲ್ಲರೂ ಅದನ್ನು ಒಪ್ಪಿ, ಅಪ್ಪಿಕೊಳ್ಳುತ್ತಾರೆ ಎಂದರು.

ಸಭೆಯ ಸಾನ್ನಿಧ್ಯ ವಹಿಸಿದ ಶಿರಸಿಯ ಬಣ್ಣದ ಮಠದ ಶ್ರೀ ಶಿವಲಿಂಗ ಸ್ವಾಮಿಗಳವರು ಇಂದಿನ ವಿಜ್ಞಾನ ಗಾಳಿಯಲ್ಲಿ ಹಾರುವುದನ್ನು, ನೀರಿನಲ್ಲಿ ಈಜುವುದನ್ನು, ಎಲ್ಲವನ್ನೂ ಶೋಧಿಸಿದೆ. ಸಂಪಾದನೆಯ ಹಿಂದೆ ಬಿದ್ದು ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳುವ ಸ್ಥಿತಿಯನ್ನು ನೀಡಿದೆ. ಭಾರತ ಚೆಲುವಿನ ಪ್ರಕೃತಿಯ ರಂಗ. ಭಾವ, ರಾಗ, ತಾಳಗಳ ಸಮನ್ವಯವೇ ಭಾರತ. ಭಾರತೀಯರಲ್ಲಿ ಆಶ್ರಯ ಕೊಡುವುದನ್ನು, ಬದುಕು ನೀಡುವುದರಲ್ಲಿ ದೇವತ್ತ್ವಕ್ಕೆ ಏರಿಸುವ ಪದ್ಧತಿ ಇದೆ. ಆದ್ದರಿಂದ ಗೋವು ನಮ್ಮೆಲ್ಲರ ತಾಯಿಯಾಗಿದೆ. ಗೋವಿನಂತೆ ಉಳಿದ ಭಾರತೀಯವಾದ ಒಳ್ಳೆಯ ಮೌಲ್ಯಗಳೆಲ್ಲ ನೇಪಥ್ಯಕ್ಕೆ ಸರಿಯುತ್ತಿವೆ. ಇದು ವಿಶಾದನೀಯ ಎಂದು ಹೇಳಿ ಪಾಶ್ಚಾತ್ಯರ ಅಂಧಾನುಕರಣೆಯನ್ನು ಬಿಟ್ಟು, ಇನ್ನಾದರೂ ನಿಜವಾದ ಭಾರತೀಯರಾಗಬೇಕು. ಇಂತಹ ಭಾರತೀಯ ಮೌಲ್ಯಗಳನ್ನು ಬೆಳೆಸುವುದಕ್ಕಾಗಿಯೇ ಶ್ರೀ ರಾಘವೇಶ್ವರರು ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಪೂಜ್ಯರ ಪ್ರಯತ್ನಕ್ಕೆ ನಾವು ಸಹಕಾರ ನೀಡಬೇಕು ಎಂದು ನುಡಿದರು.

ಚಲನಚಿತ್ರ ನಟ ಸುರೇಶ ಒಬೆರಾಯ್ ಮಾತನಾಡಿ ವಿಶ್ವದಲ್ಲಿ ವ್ಯರ್ಥವಾದ ವಸ್ತು ಎಂಬುದಿಲ್ಲ. ಪ್ರತಿಯೊಂದಕ್ಕೂ ತನ್ನದೇ ಆದ ಪ್ರಯೋಜನವಿದೆ. ಪೂಜ್ಯ ಶ್ರೀಗಳ ಅನುಗ್ರಹದ ಕೃಪೆಗೆ ಒಳಗಾದ ನಾನು ಶ್ರೀಮಠದ ಎಲ್ಲ ಕಾರ್ಯಗಳಿಂದ ಆಕರ್ಷಿತನಾಗಿದ್ದೇನೆ ಎಂದು ಹೇಳಿದರು.

ಆಶೀರ್ವಚ ನೀಡಿದ ಶ್ರೀ ರಾಘವೇಶ್ವರ ಶ್ರೀಗಳು ಇಂದಿನ ಸಭೆಯಲ್ಲಿ ಸಾಹಿತ್ಯ, ಸೌಂದರ್ಯ, ಸನ್ಮಾನಗಳ ತ್ರಿವೇಣಿ ಸಂಗಮವಾಗಿದೆ. ಯಾವುದೂ ಭಾವಪೂರ್ಣವಾಗಿ ಬರುತ್ತದೋ ಅದು ಕೇವಲ ಶಬ್ದದ ಮಟ್ಟದಲ್ಲಿ ಉಳಿಯದೇ ಸಾಹಿತ್ಯವಾಗುತ್ತದೆ. ಇದನ್ನು ಆಸ್ವಾದಿಸುವ ಸಹೃದಯನಿದ್ದರೆ ಮಾತ್ರ ಆ ಕಾವ್ಯಕ್ಕೆ ಬೆಲೆ. ಸಾಹಿತ್ಯವನ್ನು ಪುಸ್ತಕದಿಂದ ಅಳೆಯದೇ ಬದುಕಿನಿಂದ ಅಳೆಯಬೇಕು. ಇಂತಹ ಬದುಕು, ಬರಹ, ಎರಡನ್ನೂ ಸಮನ್ವಯಗೊಳಿಸಿದ ಗೌರೀಶ್ ಕಾಯ್ಕಿಣಿ ಈ ಮಣ್ಣಿನ ಸಂಪತ್ತು. ದೇವಾಲಯದ ವತಿಯಿಂದ ನೀಡಲಾದ ಸಾರ್ವಭೌಮ ಪ್ರಶಸ್ತಿ ಅವರ ವಿಚಾರಧಾರೆಗೆ ಸಂದಿದೆ. ದೇವಾಲಯಕ್ಕೆ ವಿದ್ಯೆ, ಕಲೆ, ಧರ್ಮ, ಎಲ್ಲದರ ಸ್ಪರ್ಶವೂ ಅಗತ್ಯ. ಶಿವರಾತ್ರಿ ಪ್ರತಿವರ್ಷವೂ ನವ-ನವರಾತ್ರಿ ಆಗಬೇಕು. ಈ ಶಿವರಾತ್ರಿಯ ಪುಣ್ಯಪರ್ವ ನಾಡಿಗೆ ಮಂಗಳವನ್ನು ಉಂಟುಮಾಡಲಿ ಎಂದು ಆಶಿಸಿದರು.

ಮೋಹನ ಹೆಗಡೆಯವರಿಂದ ಸಭಾಪೂಜೆ, ಬೀರಣ್ಣ ನಾಯಕ ದಂಪತಿಯಿಂದ ಸಭಾರ್ಚನೆ, ಡಿ.ವಿ. ಶಿವರಾಮಯ್ಯನವರಿಂದ ಸಮ್ಮಾನಿತರ ಪರಿಚಯ, ಜಗದೀಶ ಶರ್ಮಾರಿಂದ ಸಭಾಕೂಪ ನಿರ್ವಹಣೆ ನಡೆಯಿತು.

---------------------------------------------------------------------------------------------------------------------------------------------------------------------------------------

Leave a Reply