ಮುಖಪುಟ >> ಮಹಾ ಶಿವರಾತ್ರಿ

ಬದುಕಿನಲ್ಲಿ ಸಾಮಾಜಿಕ ಜವಾಬ್ದಾರಿ ಅಗತ್ಯ – ಮೋಹನ ಆಳ್ವ

..................................................................................................................................................

ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೨೪ – ಸುಮಾರು ಇಪ್ಪತ್ತು ಸಹಸ್ರ ವರ್ಷಗಳ ಇತಿಹಾಸ ಹೊಂದಿದ ಜಾಗತಿಕ ಸ್ತರದ ಅತ್ಯಂತ ಪ್ರಾಚೀನ ಸಂಸ್ಕೃತಿ ನಮ್ಮದು. ಮೂರುಸಾವಿರಕ್ಕೂ ಮೀರಿದ ಭಾಷೆಗಳಿವೆ. ಈ ಎಲ್ಲವನ್ನೂ ಏಕಸೂತ್ರದಲ್ಲಿ ಬಂಧಿತವಾಗಿರುವುದು ಭಾರತೀಯ ಜೀವನ ಪದ್ಧತಿಯಿಂದ. ದಕ್ಷಿಣದ ಕನ್ಯಾಕುಮಾರಿಯಿಂದ ಉತ್ತರದ ಹಿಮಾಲಯದವರೆಗೆ ಭಾರತೀಯರು ಬದುಕಿದ ರೀತಿ ಒಂದೇ.

ಸಾರ್ವಭೌಮ ಸಮ್ಮಾನ ಸ್ವೀಕರಿಸುತ್ತಿರ್ವ ಶ್ರೀ ಮೋಹನ ಆಳ್ವ

ಸಾರ್ವಭೌಮ ಸಮ್ಮಾನ ಸ್ವೀಕರಿಸುತ್ತಿರ್ವ ಶ್ರೀ ಮೋಹನ ಆಳ್ವ

ಇಂತಹ ಮಹತ್ತ್ವಪೂರ್ಣ ಸ್ಥಾನದಲ್ಲಿರುವ ನಮಗೆ ಸಾಮಾಜಿಕ ಜವಾಬ್ದಾರಿಯೂ ಇದ್ದೇ‌ಇದೆ ಎಂದು ಖ್ಯಾತ ಶಿಕ್ಷಣ ತಜ್ಞ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಹೇಳಿದ್ದಾರೆ.

ಇಲ್ಲಿ ಮಹಾಶಿವರಾತ್ರಿಯ ’ಸಾರ್ವಭೌಮ ಪ್ರಶಸ್ತಿ’ಯನ್ನು ಸ್ವೀಕರಿಸಿ ಮಾತನಾಡುತ್ತಿದ್ದ ಅವರು ನಮ್ಮ ಪ್ರಾಚೀನರು ಅದ್ಭುತ ರೀತಿಯಲ್ಲಿ ದೇವಾಲಯಗಳನ್ನು, ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನೂ ನಿರ್ಮಿಸಿದ್ದಾರೆ. ಅವರ ಧಾರ್ಮಿಕ ಚಿಂತನೆ, ಪ್ರದರ್ಶನ ಕಲೆಯ ಸಂಸ್ಕೃತಿ, ಆಧ್ಯಾತ್ಮಿಕ ಚಿಂತನೆಗಳು ಶತಮಾನಗಳ ಕಾಲ ಭಾರತೀಯರನ್ನು ರುಜು ಮಾರ್ಗದಲ್ಲಿ ಮುನ್ನಡೆಸುವಂತಹವುಗಳಾಗಿದ್ದು, ಇಂತಹ ಸಂಸ್ಕೃತಿಯ ವಾರಸುದಾರರಾದ ನಮ್ಮ ಮೇಲೆ ಹಲವಾರು ಸಾಮಾಜಿಕ ಉತ್ತದಾಯಿತ್ವಗಳಿವೆ ಎಂದರು. ಶ್ರೀ ರಾಘವೇಶ್ವರಭಾರತೀ ಶ್ರೀಗಳದ್ದು ಮಗುವಿನಂತಹ ಮುಗ್ಧ ಮನಸ್ಸು. ಇಂತಹ ಶ್ರೀಗಳು ಈಗಾಗಲೇ ಹಲವು ಹೊಸತುಗಳನ್ನು ನೀಡಿ ಖ್ಯಾತರಾಗಿದ್ದಾರೆ. ಇದೀಗ ಗೋಕರ್ಣ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಟಿಬದ್ಧರಾಗಿದ್ದಾರೆ ಎಂದು ನುಡಿದರು.

ಕೆ.ಪಿ.ಸಿ.ಸಿ. ಉಪಾಧ್ಯಕ್ಷ ಉಮೇಶ್ ಭಟ್ ಮಾತನಾಡಿ ನಾವು ಸದಾ ನಮ್ಮ ಸ್ವಂತದ ಬಗೆಗೆ ಚಿಂತಿಸುತ್ತೇವೆ. ಆದರೆ ಮಠಾಧೀಶರು, ಸಂತರು ಸುತ್ತಲಿನ ಸಮಾಜದ ಬಗ್ಗೆ ಯೋಚಿಸುತ್ತಿರುತ್ತಾರೆ. ಅರವತ್ತು ವರ್ಷಗಳ ನನ್ನ ಅನುಭವದಲ್ಲಿ ಇದೇ ಮೊದಲ ಬಾರಿಗೆ ನಾನು ಸ್ಪಷ್ಟ ಗೋಕರ್ಣವನ್ನು ನೋಡುತ್ತಿದ್ದೇನೆ. ವಾಸ್ತವವಾಗಿ ಶ್ರೀಗಳು ಎಂದೂ ಗೋಕರ್ಣ ಕ್ಷೇತ್ರವನ್ನು ಬಯಸಲಿಲ್ಲ. ನಾನೂ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗಾಗಿ ಚಿಂತಿಸಿದ ಹಲವರು ಶ್ರೀಗಳಲ್ಲಿ ಈ ಕ್ಷೇತ್ರವನ್ನು ತೆಗೆದುಕೊಂಡು ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿದ್ದೆವು. ಈ ಹಸ್ತಾಂತರ ಕ್ರಮ ಪ್ರತಿಶತ ನೂರರಷ್ಟು ಸರಿ. ಏಕೆಂದರೆ ಸಮಾಜದ ಕೊಟ್ಟ ಕೊನೆಯ ವ್ಯಕ್ತಿಯವರೆಗೂ ಸಹ ಅಭಿವೃದ್ಧಿಯ ಪಾಲು ದೊರಕಬೇಕೆಂಬುದು ಪೂಜ್ಯ ಶ್ರೀಗಳ ಆಶಯ. ಈಗಾಗಲೇ ಗೋಕರ್ಣದ ಚಿತ್ರಣವನ್ನು ಬದಲಾಯಿಸಿ ಹೊಸ ಪರಿವರ್ತನೆಗೆ ಕಾರಣವಾದ ಅವರು ಕೆಲವೇ ಕಾಲದಲ್ಲಿ ಗೋಕರ್ಣವನ್ನು ಜಾಗತಿಕ ಸ್ತರದಲ್ಲಿ ಪ್ರಸಿದ್ಧಪಡಿಸುತ್ತಾರೆ ಎಂದು ಹೇಳಿದರು.

ಸುಬ್ರಹ್ಮಣ್ಯದ ಮಠಾಧೀಶ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಗಳವರು ಹತ್ತು ತಲೆಯ ರಾವಣ ಇಲ್ಲಿ ಭಗವಂತನನ್ನು ಪಡೆಯಲು ಪ್ರಯತ್ನಿಸಿ ಸೋತ ಘಟನೆ ಹತ್ತಾರ ವಿಷಯಗಳತ್ತ ಮನಸ್ಸು ಹಾಕಿದ ಮನುಷ್ಯನಿಗೆ ದೇವರನ್ನು ಪಡೆಯಲು ಸಾಧ್ಯವಾಗದು, ತದೇಕ ನಿಷ್ಠೆಯಿಂದ ಇಲ್ಲದೇ ಬದುಕಿನಲ್ಲಿ ಶ್ರೇಷ್ಠವಾದದ್ದು ಅಲಭ್ಯ ಎಂಬುದಕ್ಕೆ ಸಂಕೇತ. ನಮ್ಮ ಬದುಕಿಗೆ ಒಂದು ಎಲ್ಲೆ ಇದೆ. ಅದನ್ನು ಎಂದೂ ಮೀರಬಾರದು. ಸಮುದ್ರಕ್ಕೆ ಗಡಿಯಿದ್ದಂತೆ ಇಂತಹ ಗುಣದಿಂದಾಗಿಯೇ ಶ್ರೀರಾಮಚಂದ್ರ ಮರ್ಯಾದಾ ಪುರುಷೋತ್ತಮ ಎನಿಸಿಕೊಂಡ. ಇಂತಹ ರಾಮನನ್ನು ಆರಾಧಿಸುವ ಶ್ರೀ ರಾಘವೇಶ್ವರರು ಗೋಕರ್ಣದ ಹೊಸ ಸೃಷ್ಟಿಗೆ ಹೊರಟಿದ್ದಾರೆ. ಅಂತರಂಗ ಶುದ್ಧಿಗೆ ಬಹಿರಂಗ ಶುದ್ಧಿಯೂ ಅಗತ್ಯ ಎಂದು ಹೇಳಿ ತಮ್ಮ ಮತ್ತು ರಾಮಚಂದ್ರಾಪುರಮಠದ ಮಧ್ಯೆ ಇರುವ ಶತಮಾನಗಳ ಹಿಂದಿನಿಂದಲೂ ಇರುವ ಸಂಬಂಧವನ್ನು ವಿವರಿಸಿದ್ದಲ್ಲದೇ ಗೋಕರ್ಣದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಂಕಲ್ಪಿಸಿರುವ ರಾಘವೇಶ್ವರ ಶ್ರೀಗಳ ಪ್ರಯತ್ನಕ್ಕೆ ಸಫಲತೆಯನ್ನು ಹಾರೈಸಿದರು.

ಶ್ರೀ ರಾಘವೇಶ್ವರಭಾರತೀ ಶ್ರೀಗಳು ಸಾರ್ವಭೌಮ ಪ್ರಶಸ್ತಿ ಪುರಸ್ಕೃತರಾದ ಮೋಹನ ಆಳ್ವರ ಸಾಧನೆಯನ್ನು ನೋಡಿ ಸಂತಸಪಟ್ಟಿದ್ದೇವೆ. ಇಂತಹ ವ್ಯಕ್ತಿಗಳು ಸಮಾಜಕ್ಕೆ ಸಂಪತ್ತು. ಕ್ರೀಡೆ, ಶಿಕ್ಷಣ, ಕಲೆ, ಸಂಗೀತ, ನೃತ್ಯ ಮೊದಲಾದ ಬಹುಮುಖ ಪ್ರತಿಭೆಗಳನ್ನು ಹೊಂದಿರುವ ಆಳ್ವ ಅನೇಕ ಹೊಸತುಗಳಿಗೆ ಹರಿಕಾರರಾದವರು ಎಂದು ಪ್ರಶಂಸಿಸಿ ನಮ್ಮ ಅಂತರ್ಮನಸ್ಸಿನ ಜಾಗೃತಿಯೇ ಶಿವರಾತ್ರಿಯ ಸಂಕೇತ. ಇದು ಮಂಗಳಕರವಾದ ಮುಂಬೆಳಗನ್ನು ಹೊಂದಿದ ರಾತ್ರಿ. ಉಳಿದ ರಾತ್ರಿಗಳಂತಲ್ಲ ಎಂದು ಹೇಳಿ ಜನರು ಒಳ್ಳೆಯದನ್ನು ಗುರುತಿಸುವಂತಹ ಗುಣಗ್ರಾಹಿಗಳಾಗುವಂತಹ ಸ್ಥಿತಿಯನ್ನು ಈ ಶಿವರಾತ್ರಿ ಪರ್ವ ನೀಡಲೆಂದು ಹಾರೈಸಿದರು.

---------------------------------------------------------------------------------------------------------------------------------------------------------------------------------------

Leave a Reply