ದೇವಾಲಯ ನಿರ್ವಾಹಕರು ಗೋಡೆಯಾಗದೆ ದ್ವಾರಗಳಾಗಬೇಕು – ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀ
..................................................................................................................................................
ಗೋಕರ್ಣ, ಫೆ ೨೨ – ಗೋಕರ್ಣ ಭೋರ್ಗರೆವ ಕಡಲ ತೀರದಲ್ಲಿದೆ. ಈ ಕಡಲಿಗೆದುರಾಗಿಯೇ ಕರುಣೆಯನ್ನೇ ಒಡಲಾಳದಲ್ಲಿ ಕರುಣೆಯನ್ನು ಹೊತ್ತ ಸಾರ್ವಭೌಮ ಮಹಾಬಲನಿದ್ದಾನೆ. ಭಕ್ತರಿಗೆ ಕೈಲಾಸಕ್ಕೆ ಬರುವುದು ಕಷ್ಟವೆಂಬ ಅನುಕಂಪದಿಂದ ಇಲ್ಲಿಗೆ ಬಂದ ಶಿವ. ರಾವಣನು ತನ್ನ ಆತ್ಮಲಿಂಗವನ್ನು ಕಳೆದುಕೊಂಡಂತೆ ಮನುಷ್ಯರೂ ಕಳೆದುಕೊಳ್ಳದಿರಲೆಂದು ಪಾತಾಳದವರೆಗೂ ವ್ಯಾಪಿಸಿ ನಿಂತಿದ್ದಾನೆ. ಈ ದೇವಾಲಯದ ನಿರ್ವಹಣೆ ಬಹಳಕಾಲದ ನಂತರ ನಮಗೆ ಸಿಕ್ಕಿದೆ. ನಾವು ಭಕ್ತ-ದೇವರ ಮಧ್ಯೆ ಗೋಡೆಯಾಗದೆ ದ್ವಾರವಾಗುತ್ತೇವೆ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ನುಡಿದರು.
ಸಾಗರ ಸಂಗಮದ ನಂದಿಕೇಶ್ವರ ವೇದಿಕೆಯಲ್ಲಿ ದಿ.೨೨ ರವಿವಾರದಂದು ಧರ್ಮಸಭೆಯಲ್ಲಿ ಸಾನ್ನಿಧ್ಯವಹಿಸಿ ಆಶೀವ್ಚನ ನೀಡುತ್ತಿದ್ದ ಶ್ರೀಗಳು ಭಗವಂತ ಕೊಟ್ಟ ಎಲ್ಲಾ ಉತ್ತಮ ವಸ್ತುಗಳನ್ನು ಇಟ್ಟುಕೊಳ್ಳುವ ಯೋಗ್ಯತೆ ನಮಗಿಲ್ಲ. ಎಲ್ಲವನ್ನೂ ಕಳೆದುಕೊಳ್ಳುವುದೇ ಹೆಚ್ಚು. ಸುಂದರವಾದ ಪ್ರಕೃತಿಯನ್ನು ಕೊಟ್ಟ. ಅದನ್ನು ಬೋಳಾಗಿಸಿ ನಾವು ಲಾಭವನ್ನು ಪಡೆದೆವು. ಅಗಾಧವಾದ ಸಾಗರವನ್ನು ನೀಡಿದ. ಅದನ್ನು ಮಲಿನಗೊಳಿಸಿದೆವು. ಇಂತಹ ತಪ್ಪು ಇನ್ನುಮುಂದೆ ನಡೆಯಬಾರದು. ಬದಲಾವಣೆ ನಮ್ಮ ಕನಸು.
ಇಡೀ ಜಗತ್ತೇ ಗೋಕರ್ಣವನ್ನು ಗುರುತಿಸುವಂತಾಗಬೇಕು. ಇದು ನಮ್ಮ ಹಂಬಲ. ಸರ್ಕಾರ ಚಾರಿತ್ರಿಕ ನಿರ್ಣಯ ಕೈಗೊಂಡು ತನ್ನ ಹೆಸರನ್ನು ಚಿರಸ್ಥಾಯಿಯನ್ನಾಗಿಸಿದೆ ಎಂದೂ ನುಡಿದ ಪೂಜ್ಯರು ಎಲ್ಲ ಅರ್ಥದಲ್ಲಿ ಈ ಕ್ಷೇತ್ರದಲ್ಲಿ ಇನ್ನೋರ್ವರಿಗೆ ತಲೆಬಾಗದ ಸಾರ್ವಭೌಮ ಕ್ಷೇತ್ರವಾಗಬೇಕೆಂದು ಆಶಿಸಿದರು.
ಯಲ್ಲಾಪುರದ ಸಂಕಲ್ಪ ಸಂಸ್ಥೆಯ ಪ್ರಮೋದ ಹೆಗಡೆ ಮಾತನಾಡಿ ನಂಬಿಕೆಯ ಆಧಾರದ ಮೇಲೆ ಪೂಜ್ಯ ಶ್ರೀಗಳು ಸಮಾಜವನ್ನು ಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ದೇವಾಲಯದ ವಿಷಯದಲ್ಲಿ ಸಾವಿರಾರು ಹೃದಯಗಳು ಸಮ್ಮಿಲಿತವಾಗಿವೆ. ನಾವು ಜಾತಿ, ಮತ, ಪಕ್ಷ ಭೇದವನ್ನು ಮರೆತು ಪೂರ್ವಾಗ್ರಹವಿಲ್ಲದೇ ಗುಣಗ್ರಾಹಿಗಳಾಗುವುದು ಈ ಸಂದರ್ಭದ ಅಗತ್ಯವಾಗಿದೆ ಎಂದರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಕೆ. ದಿವಾಕರ ಅವರು ಭಾರತೀಯ ಸಂಸ್ಕೃತಿ, ನಡೆ, ನುಡಿಗಳ ಬಗ್ಗೆ, ಗೋವಿನ ಮಹತ್ತ್ವದ ಬಗ್ಗೆ ತಮ್ಮಂತಹವರು ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ ಅಮೂರ್ತ ಕಲ್ಪನೆಗಳಾದ ಅವುಗಳಿಗೆ ಸಾಕಾರ ರೂಪ ತಂದವರು ಪೂಜ್ಯ ಶ್ರೀ ರಾಘವೇಶ್ವರರು. ಇಂತಹ ವಿಶ್ವ ವಂದ್ಯರಾದ ಧಾರ್ಮಿಕ ಮುಖಂಡರು ಮಾತ್ರ ಇಂತಹ ಮಹಾಬಲೇಶ್ವರ ದೇವಾಲಯವನ್ನು, ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಬಲ್ಲರು. ಈ ಹಸ್ತಾಂತರ ಸರ್ಕಾರದ ಐತಿಹಾಸಿಕ ನಿರ್ಣಯ. ಸರ್ಕಾರ ದೇವಾಲಯವನ್ನು ಖಾಸಗೀಕರಣಗೊಳಿಸಿಲ್ಲ. ಬದಲಾಗಿ ಜಾತಿ, ಮತ ಭೇದವಿಲ್ಲದೇ ಲೋಕಾರ್ಪಣಗೊಳಿಸಿದೆ. ಪೂಜ್ಯರು ಇಂದು ಕೇವಲ ಈ ನಾಡಿನ ಸ್ವತ್ತಾಗಿ ಉಳಿದಿಲ್ಲ. ನ್ಯೂಯಾರ್ಕ್, ಬ್ಯಾಂಕಾಕ್ ಮೊದಲಾದೆಡೆಗಳಲ್ಲಿಯೂ ಶ್ರೀಗಳನ್ನು ಗೌರವಿಸುವವರನ್ನು ನಾನು ಕಂಡಿದ್ದೇನೆ. ನಿಜವಾದ ಅರ್ಥದಲ್ಲಿ ಶ್ರೀಗಳು ಜಗದ್ಗುರುಗಳಾಗಿದ್ದಾರೆ. ಜನತೆ ಹಾಗೂ ಪ್ರಭುತ್ವ ಎರಡೂ ಶ್ರೀಗಳ ಒಟ್ಟಿಗೇ ಇದೆ ಎಂದರು.
ಮಂಗಳ ವಾರಪತ್ರಿಕೆಯ ಸಂಪಾದಕ ವೆಂಕಟನಾರಾಯಣ ಮಾತನಾಡಿ ಪೂಜ್ಯ ಶ್ರೀಗಳು ಆದಿ ಶಂಕರರಂತೆ ಅಲ್ಪಕಾಲದಲ್ಲಿ ಅಗಾಧ ಸಾಧನೆ ಗೈದಿದ್ದಾರೆ ಎಂದರು. ದಿವ್ಯ ಸಾನ್ನಿಧ್ಯವನ್ನಿತ್ತ ಹಾಸನದ ಶ್ರೀ ರಾಮಾನಂದ ಅವಧೂತರು ಭಗವಂತನ ರೂಪ ಹಲವು. ಅರ್ಚನೆ ಅನೇಕ ವಿಧ. ಶಿವರಾತ್ರಿ ಪುಣ್ಯಪರ್ವ ಎಂದರು.
ಆಂಧ್ರದ ಉದ್ಯಮಿ ಕೆ.ಎನ್. ರಾವ್ ಶ್ರೀರಾಮಚಂದ್ರಾಪುರಮಠದ ಶ್ರೀಗಳ ರಾಮಾಯಣ ಮಹಾಸತ್ರ, ವಿಶ್ವ ಗೋ ಸಮ್ಮೇಳನ, ಗೋ ರಕ್ಷಣೆ, ಗೋಶಾಲಾ ನಿರ್ಮಾಣ ಇವೆಲ್ಲವೂ ಒಬ್ಬ ವ್ಯಕ್ತಿಯ ಒಂದು ಜೀವಮಾನದ ಸಾಧನೆಯ ವಿಷಯಗಳು. ಇಂತಹ ಭಾರತೀಯ ಅಂತಃಸತ್ವದ ಕಾರ್ಯಕ್ರಮಗಳಿಂದಾಗಿಯೇ ಶ್ರೀಗಳು ನಾಡಿನೆಲ್ಲೆಡೆಯಲ್ಲದೇ ವಿದೇಶಗಳಲ್ಲಿಯೂ ಪ್ರಸಿದ್ಧರಾಗಿದ್ದಾರೆ. ಹಸು ಕೇವಲ ಪ್ರಾಣಿಯಲ್ಲ. ಅದು ಭಾರತದ ಅಸು-ಪ್ರಾಣ. ಇಂತಹ ಗೋಸೇವಾಸಕ್ತ ಗೋಕರ್ಣ ಮಂಡಲಾಚಾರ್ಯರಿಗೆ ಗೋಕರ್ಣೇಶ್ವರನ ದೇವಾಲಯದ ನಿರ್ವಹಣಾ ವ್ಯವಸ್ಥೆಯ ಅಧಿಕಾರ ದೊರೆತಿದೆ. ಇದು ನಾಡಿನ ಭಾಗ್ಯ ಎಂದರು.
ಉಷಾ ರಮೇಶ ಪ್ರಸಾದರಿಂದ ಪ್ರಾರ್ಥನೆ, ಬೀರಣ್ಣ ನಾಯಕರಿಂದ ಸಭಾಪೂಜೆ, ನಾಗರಾಜ ಹಿತ್ತಲಮಕ್ಕಿ ದಂಪತಿಯಿಂದ ಸಭಾರ್ಚನೆ-ಫಲಸಮರ್ಪಣೆ ನಡೆದವು. ಜಗದೀಶ ಶರ್ಮಾ ಹಾಗೂ ಮೋಹನ ಹೆಗಡೆ ಸಭೆಯನ್ನು ನಿರ್ವಹಿಸಿದರು.

Leave a Reply