ಮುಖಪುಟ >> ಪ್ರಕಟಣೆಗಳು, ಸುದ್ದಿಪುಟ

ಅಮಂಗಲ ಯಾತ್ರೆಗಳ ಅಂತ್ಯವನ್ನು ಉದ್ದೇಶಿಸಿ ವಿಶ್ವಮಂಗಲ ಗೋಗ್ರಾಮ ಯಾತ್ರೆ

..................................................................................................................................................

ವಿಶ್ವಮಂಗಲ ಗೋಗ್ರಾಮ ಯಾತ್ರೆ ಸನ್ನಿಹಿತವಾಗುತ್ತಿದೆ.ಗೋವು ಗ್ರಾಮಗಳ ಕಡೆಗೆ ಮತ್ತೆ ಮರಳಿ,ಭರತಭೂಮಿಯ ಸೊಬಗನ್ನು ಸವಿಯುವ ಗಳಿಗೆ ಹತ್ತಿರ ಹತ್ತಿರಕ್ಕೆ ಬರುತ್ತಿದೆ.ನಮಗೆ ಯಾತ್ರೆಗಳು ವಿಶೇಷವಲ್ಲ.ಏಕೆಂದರೆ ದಿನಬೆಳಗಾದರೆ ಸಾಲು-ಸಾಲು ಯಾತ್ರೆಗಳು ಕಣ್ಣುಮುಂದೆ ಹಾದುಹೋಗುತ್ತವೆ.ವ್ಯತ್ಯಾಸ ಇಷ್ಟೇ.ಬರಲಿರುವುದು ಮಹಾಮಂಗಳ ಯಾತ್ರೆಯಾದರೆ,ಇವು ಅಮಂಗಳ ಯಾತ್ರಾ ಸರಣಿಗಳು.ಗೋವುಗಳನ್ನು ಕಸಾಯಿಗೆ ಸಾಗಿಸುವ ಯಾತ್ರೆಗಳು ಇವು.ಯಾವುದೇ ದಯ-ದಾಕ್ಷಿಣ್ಯವಿಲ್ಲದೇ,ಹಸುಗಳನ್ನು ಟ್ರಕ್ಕುಗಳಲ್ಲಿ ಒತ್ತೊತ್ತಾಗಿ ತುಂಬಿ,ಕಸಾಯಿ ಖಾನೆಗಳಿಗೆ ಸಾಗಿಸಿ,ಅವುಗಳ ಮಾರಣಹೋಮಕ್ಕೆ ಕಾರಣವಾಗುವ ಪರಿ ಹೃದಯವಿದ್ರಾವಕ.ಅದು ನಿಲ್ಲದಿದ್ದರೆ ನಮ್ಮಗಳ ಉಳಿವು ಅನುಮಾನಾಸ್ಪದ ವಿಷಯವೇ ಆಗಿದೆ.ಒಂದು ಗೋವು ನಮ್ಮಗಳ ದಿನನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿರುವ ಪರಿಗೆ ಧಕ್ಕೆಯಾದರೆ,ಮತ್ತೊಂದು ನಮ್ಮಗಳ ಮನೋಭಾವದ ಋಣಾತ್ಮಕ ಗತಿಯಿಂದಾಗಿ ನಾವು-ನಾವುಗಳೇ ಪರಸ್ಪರ ಕಿತ್ತು ತಿನ್ನುವ ಸನ್ನಿವೇಶಕ್ಕೆ ತುತ್ತಾಗುತ್ತಿದ್ದೇವೆ.ಹಾಗಾಗುವುದು ಒಳ್ಳೆಯದೇ ಅಲ್ಲವೇ?ಅದಕ್ಕಾಗಿ ಪರಿಸ್ಥಿತಿಯನ್ನು ಸುಧಾರಿಸಿಕೊಡು ಅಲ್ಲಿಂದ ಮೇಲೆ ಬರಲು ವಿಶ್ವಮಂಗಲ ಗೋಗ್ರಾಮ ಯಾತ್ರೆಯನ್ನು ಸಂಕಲ್ಪಿಸಿ ಆಗಿದೆ.ಹೆಸರೇ ಹೇಳುವಂತೆ ಈ ಯಾತ್ರೆ ನಾವು ದಿನನಿತ್ಯ ನೋಡುವ ಅಮಂಗಲ ಯಾತ್ರಗಳಂತಿರದೇ ಸಮಗ್ರ ವಿಶ್ವದ ಮಂಗಲ ಸಂದೇಶವನ್ನು ಹೊತ್ತು ಭಾರತದ ನರನಾಡಿಗಳನ್ನು ಜಾಗೃತಗೊಳಿಸಲಿದೆ.ಇದರ ಬೀಜಾವಾಪ ಆಗಿದ್ದು 2007 ರ ವಿಶ್ವ ಗೋಸಮ್ಮೇಳನದಲ್ಲಿ.ಅಲ್ಲಿ ಭಿನ್ನ-ವಿಭಿನ್ನ ಗೋಭಕ್ತರು ಒಂದೆಡೆ ಸೇರಿ ವಿಶ್ವಮಂಗಲದ ಸಂಕಲ್ಪವನ್ನು ತೊಟ್ಟರು.ಇಲ್ಲಿ ಸಂಕಲ್ಪ ಕೈಗೊಂಡು ಭಾರತದ ಮೂಲೆ ಮೂಲೆಗಳಲ್ಲಿ ಸಂಚರಿಸಿ,ಗೋಆಧಾರಿತ ಗ್ರಾಮ ಜೀವನದ ಶ್ರೀಮಂತಿಕೆಯನ್ನು ಪರಿಚಯಿಸಿ,ಅಂತೆಯೇ ಬದುಕಲು ಸ್ಪೂರ್ತಿ ತುಂಬಲಿದ್ದಾರೆ.ಇದರಲ್ಲಿ ಅವರಿವರೆನ್ನದೇ ಸಮಸ್ತರೂ ಭಾಗವಹಿಸುವ ಅನಿವಾರ್ಯತೆ,ಅಗತ್ಯತೆ ಎಲ್ಲವೂ ಇದೆ.ಏಕೆಂದರೆ ಈ ಯಾತ್ರೆ ಎಲ್ಲರ ದಿನನಿತ್ಯದ ಬದುಕನ್ನು ಸುಂದರಗೊಳಿಸಲು ಹೊರಡುತ್ತಿದೆ.ಹಾಗೆಂದು ರಾಷ್ಟ್ರದ ಪ್ರತಿಯೊಬ್ಬರೂ ತಮ್ಮ ಕರ್ತವ್ಯ,ಜವಾಬ್ದಾರಿಗಳನ್ನು ಅಲ್ಲಲ್ಲಿಯೇ ಕಳಚಿ,ಘೋಷಣೆಗಳನ್ನು ಕೂಗುತ್ತಾ ದೊಡ್ಡ-ದೊಡ್ಡ ಮೆರವಣಿಗೆಗಳನ್ನು ಸಂಘಟಿಸಬೇಕು ಎಂಬುದನ್ನು ಪ್ರತಿಪಾದಿಸುತ್ತಿಲ್ಲ.ನಿರ್ವಹಿಸುತ್ತಿರುವ ಕಾರ್ಯವು ಸುಂದರ ಜೀವನ ನಿರ್ಮಾಣದ ಸಂಕಲ್ಪಕ್ಕೆ ನೀರೆರೆಯುವ ಕಾಳಜಿ ಬೆಳೆಸಿಕೊಳ್ಳಿ ಎಂಬುದನ್ನು ಹೇಳಬಯಸುತ್ತೇವೆ.

                                          ಯಾತ್ರೆ ನಿಮ್ಮಲ್ಲಿಗೂ ಬರಲಿದೆ.ಆಗ ನೀವೂ ನಮ್ಮೊಂದಿಗಿರಿ.ಸತ್ಸಂಕಲ್ಪವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳೋಣ.ಮತ್ತಷ್ಟು ಜನರನ್ನು ಒಳಗೊಳಿಸಿಕೊಳ್ಳೋಣ.

|| ವಂದೇ ಗೋಮಾತರಂ ||

ಶ್ರೀಮಜ್ಜಗದ್ಗುರು ಶ್ರೀ ಶಂಕರಾಚಾರ್ಯ ಗೋಕರ್ಣಮಂಡಲಾಧೀಶ

ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ

ಶ್ರೀರಾಮಚಂದ್ರಾಪುರಮಠ

 

ಅಂತರ್ಜಾಲ ತಾಣ: vishwagou.org

ಸಂಪರ್ಕ:govishva@gmail.com

---------------------------------------------------------------------------------------------------------------------------------------------------------------------------------------

Leave a Reply