ಮುಖಪುಟ >> ಪ್ರಕಟಣೆಗಳು, ಪ್ರಸಕ್ತ, ಸುದ್ದಿಪುಟ

“ಕೋಟಿರುದ್ರ”ದಲ್ಲೊಂದು ರುದ್ರಾಧ್ಯಾಯ

..................................................................................................................................................

‘ರುದ್ರಾಧ್ಯಾಯ’ ಅತಿ ವಿಶಿಷ್ಟವಾದ ಮಂತ್ರಗಳ ಸಂಕಲನ.ರುದ್ರನನ್ನು ಸ್ತುತಿಸುವ ಮಂತ್ರಗಳವು.ವೇದಗಳ ಅನೇಕ ಭಾಗಗಳಲ್ಲಿ ರುದ್ರನಸ್ತುತಿ ಇದೆಯಾದರೂ ಈ  ರುದ್ರಾಧ್ಯಾಯಕ್ಕೆ ತನ್ನದೇ ಆದ ಸ್ಥಾನವಿದೆ.ಇದು ಇರುವುದು ‘ಯಜುರ್ವೇದ ‘ದಲ್ಲಿ.ಯಜುರ್ವೇದದ ತೈತ್ತರೀಯ ಸಂಹಿತೆ,ವಾದಸನೇಯ ಸಂಹಿತೆ,ಕಣ್ವಸಂಹಿತೆ,ಮೈತ್ರಾಯಣೀ ಸಂಹಿತೆ,ಕಾಛಕ ಸಂಹಿತೆ,ಕಪಿಷ್ಠಲ ಸಂಹಿತೆಗಳಲ್ಲಿ  ರುದ್ರಾಧ್ಯಾಯವಿದೆ.ಯಜುರ್ವೇದದಲ್ಲಿ ಒಂದುನೂರು ಶಾಖೆಗಳಿದ್ದವು.ಅವುಗಳಲೆಲ್ಲ ರುದ್ರಾಧ್ಯಾಯವಿತ್ತಂತೆ.ಆದರೆ ಇವುಗಳಲ್ಲಿ ತೈತ್ತರೀಯ ಮತ್ತು  ವಾದಸನೇಯ ರುದ್ರಾಧ್ಯಾಯಗಳು ವೈದಿಕ ಪ್ರಪಂಚದಲ್ಲಿ ಪ್ರಚಲಿತವಾಗಿದೆ.

                                        ರುದ್ರಾಧ್ಯಾಯವನ್ನು ‘ಶತರುದ್ರೀಯ’ ಮತ್ತು ‘ನಮಕ-ಚಮಕ’ಗಳೆನ್ನುವ ಹೆಸರಿನಿಂದಲೂ ಗುರುತಿಸುತ್ತಾರೆ.ಶತ ಎಂದರೆ ಲೆಕ್ಕಕ್ಕೆ ಸಿಗದವನು,ಅನಂತ ಎಂದರ್ಥ.ಅಂತಹ ಅನಂತವಾಗಿರುವ ರುದ್ರನು ಇದರ ದೇವತೆಯಾಗಿರುವುದು ಇದನ್ನು   ಶತರುದ್ರೀಯವೆನ್ನುವಂತೆ ಮಾಡಿದೆ.ರುದ್ರಾಧ್ಯಾಯದಲ್ಲಿ ಎರಡು ಅಧ್ಯಾಯಗಳಿವೆ.ಮೊದಲ ಅಧ್ಯಾಯದಲ್ಲಿ ‘ನಮಃ’ಎಂಬ ಶಬ್ಧ ಬಳಕೆಯಾಗಿದೆ.ಆದ್ದರಿಂದ ಅದು ‘ನಮಕ’.ಎರಡನೇಯ ಅಧ್ಯಾಯದಲ್ಲಿ ‘ಚಮೇ’ ಎನ್ನುವುದು ಬಳಕೆಯಾಗಿದೆ ಅದ್ದರಿಂದ ಅದು ‘ಚಮಕ ‘.

                                         ರುದ್ರಮಂತ್ರಗಳು ತುಂಬಾ ಪ್ರಭಾವಶಾಲಿಗಳು.ಅವುಗಳ ಪಾರಾಯಣ,ಅವುಗಳನ್ನು ಉಪಯೋಗಿಸಿ ಮಾಡುವ ಯಜ್ನಗಳು ಅತಿಶಯ ಫಲಕಾರಿಗಳು.ಇದರ ಹೋಮದಿಂದ ಮಾಡಿದ ಯಜಮಾನ ಮತ್ತು ಮಾಡಿಸುವ ಋತ್ವಿಕ್ಗಳಿಬ್ಬರಿಗೂ ಕಷ್ಟಗಳ ನಿವಾರಣೆಯಾಗುತ್ತದೆ ಮತ್ತು ಭಾಗ್ಯವು ದೊರೆಯುತ್ತದೆ.ವಿಧಿಯುಕ್ತವಾಗಿ ರುದ್ರಪಠಣ ಮಾಡಿದವನ ಮದ್ಯಪಾನ,ಕಳ್ಲತನ ಬ್ರಹ್ಮಹತ್ಯೆಯಂತ ಪಾಪಗಳೂ ನಿವಾರಣೆಯಾಗುತ್ತವೆ.ಸಂಪೂರ್ಣ ವೇದ ಪಾರಾಯಣ ಮಾಡುವುದೂ,ಹನ್ನೊಂದು ಬಾರಿ ರುದ್ರಪಾರಾಯಣ ಮಾಡುವುದೂ ಸಮಾನ.ರುದ್ರಪಠಣದಿಂದ ಮುಕ್ತಿಯು ದೊರೆಯುತ್ತದೆ.ಇವೆಲ್ಲ ಪುರಾಣ-ಇತಿಹಾಸಗಳಲ್ಲಿ  ರುದ್ರಾಧ್ಯಾಯದ ಕುರಿತಾಗಿ ಬಂದ ಪ್ರಶಂಸೆಗಳು.ಇಂತಹ ರುದ್ರಾಧ್ಯಾಯದ ಬಹುದೊಡ್ಡ ಕಾರ್ಯಕ್ರಮ ಶ್ರೀಕ್ಷೇತ್ರ ಗೋಕರ್ಣದಲ್ಲಿ ನಡೆಯುತ್ತಿದೆ.ಅದು “ಕೋಟಿರುದ್ರ”. ಒಂದುಕೋಟಿ ಬಾರಿ ರುದ್ರಾಧ್ಯಾಯ ಪಾರಾಯಣ ಮಾಡುವ ಸಂಕಲ್ಪ ಮಾಡಲಾಗಿದೆ.ಈ ಕಾಲದ ಮಹೋನ್ನತ ಶಿವಾರಾಧನೆಯಿದು.

                                       ‘ಗ್ರಹಣ’ದ ವಿಶೇಷ ಪರ್ವ ನಮ್ಮನ್ನು ಸ್ವಾಗತಿಸುತ್ತಿದೆ.ಗ್ರಹಣದ ಕಾಲದಲ್ಲಿ ಭಗವಂತನ ಉಪಾಸನೆ ತುಂಬಾ ಶ್ರೇಷ್ಠವಾದದ್ದು.ಅದರಲ್ಲೂ ಸೂರ್ಯಗ್ರಹಣ ಬಹಳ ಪ್ರಶಸ್ತವಾದದ್ದು.ಈ ಸೂರ್ಯಗ್ರಹಣವನ್ನು ಕೋಟಿರುದ್ರ ಉಪಾಸನೆಯೊಂದಿಗೆ ಆಚರಿಸೋಣ.–ವಿದ್ವಾನ್ ಶ್ರೀ ಜಗದೀಶ್ ಶರ್ಮ.ಹೊಸನಗರ.

---------------------------------------------------------------------------------------------------------------------------------------------------------------------------------------

Leave a Reply