ಆಂಜನೇಯ ಜನ್ಮಸ್ಥಳಕ್ಕೆ ಜಾಗತಿಕ ಪ್ರಸಿದ್ಧಿ-ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ
..................................................................................................................................................
ಗೋಕರ್ಣ:ಮೇ 05:ಸಮುದ್ರವನ್ನು ಲಂಘಿಸಿ,ಸೀತೆಯನ್ನು ಹುಡುಕಿ ಆಕೆಯು ಶ್ರೀರಾಮನನ್ನು ಸೇರುವಂತೆ ಮಾಡಿದವನು ಆಂಜನೇಯ.ಅಂತೆಯೇ ಇಂದೂ ಕೂಡ ಈ ಆಂಜನೇಯನ ಜನ್ಮಸ್ಥಳದ ಅಭಿವೃದ್ಧಿಗಾಗಿ ಜಗತ್ತಿನ ಎಲ್ಲೆಡೆಯಿಂದ ಆಂಜನೇಯನ ಭಕ್ತರು ಕೈಜೋಡಿಸುತ್ತಿದ್ದಾರೆ.ಇನ್ನು ಕೆಲವೇ ಕಾಲದಲ್ಲಿ ಸಮಗ್ರ ಜಗತ್ತೇ ಈ ಕ್ಷೇತ್ರಕ್ಕೆ ಬರುವಂತಾದರೆ ಆಶ್ಚರ್ಯವೇನೂ ಇಲ್ಲ ಎಂದು ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಸ್ವಾಮಿಗಳು ಹೇಳಿದರು.ಸಮೀಪದ ಕೂಡ್ಲೆ ಸಮುದ್ರತೀರದಲ್ಲಿ ನಡೆದ ಆಂಜನೇಯ ಜನ್ಮಸ್ಥಳ ಅಭಿವೃದ್ಧಿ ಕುರುತಾದ ಸಮಾರಂಭದಲ್ಲಿ ಮಾತನಾಡಿದ ಪೂಜ್ಯ ಶ್ರೀಗಳವರು ದೇಹದ ಬಣ್ಣ,ಊರು,ಸಂಸ್ಕೃತಿ ಬೇರೆಯಾಗಿದ್ದರೂ ಹೃದಯದ ಪ್ರೀತಿ ಎಲ್ಲರನ್ನೂ ಒಂದುಗೂಡಿಸುವ ಮಹಾಶಕ್ತಿಯಾಗಿದೆ.ನಾವೆಲ್ಲಾ ಸೇರಿ ಈ ಕ್ಷೇತ್ರದಲ್ಲಿ ಅಸಾಧಾರಣವಾದ ಚಾರಿತ್ರಿಕ ಬದಲಾವಣೆಯನ್ನು ಮಾಡೋಣ ಎಂದು ಅಭಿಪ್ರಾಯಪಟ್ಟರು.
ಅಮೇರಿಕದ ಖ್ಯಾತ ಮನೋವೈದ್ಯರಾದ ಡಾ.ಗ್ಯಾರಿ ಮಾತನಾಡಿ ಆಂಜನೇಯನ ಸಮುದ್ರಲಂಘನ ತುಂಬಾ ಮುಖ್ಯವಾದ ಸಂಗತಿ,ಭಕ್ತನಾದವನು ಆಂಜನೇಯನಂತಿರಬೇಕು.ಮೂರನೇಬಾರಿ ಭಾರತಕ್ಕೆ ಬರುತ್ತಿರುವ ತನಗೆ ಈ ಆಂಜನೇಯನ ಜನ್ಮಸ್ಥಳದ ಅಭಿವೃದ್ಧಿ ಕಾರ್ಯದಲ್ಲಿ ಪಾಲ್ಗೊಳ್ಳಲು ಅವಕಾಶನೀಡಿದ ಪೂಜ್ಯ ಶ್ರೀ ಶ್ರೀಗಳವರಿಗೆ ತಾನು ಆಭಾರಿ ಎಂದರು.ಅಣುಶಕ್ತಿ ತಜ್ಞೆ ಡಾ.ಚಂದಾ ರವರು ಜಗತ್ತಿನೆಲ್ಲೆಡೆ ಆಂಜನೇಯನ ಭಕ್ತರಿದ್ದಾರೆ.ಎಲ್ಲರ ಸಹಕಾರದಿಂದ ಈ ಕ್ಷೇತ್ರದ ಸ್ವರೂಪವೇ ಬದಲಾಗಲಿದೆ ಎಂದರು.ಖ್ಯಾತ ಚಿತ್ರನಟಿ ಮಲ್ಲಿಕಾ ಶೆರಾವತ್ ಮಾತನಾಡಿ ಈ ಕಾರ್ಯದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದ್ದು ತಮ್ಮ ಭಾಗ್ಯ ಎಂದರು.ಸ್ಥಳದಾನ ನೀಡಿದ ಪಂ.ಸದಸ್ಯ ಗೋವಿಂದ ಗೌಡ ಶ್ರೀಗಳ ಆಶಯಕ್ಕೆ ಅನುಗುಣವಾಗಿ ಈ ಕ್ಷೇತ್ರದ ಅಭಿವೃದ್ಧಿಗೆ ಸರ್ವ ಸಹಕಾರ ನೀಡುವುದಾಗಿ ಹೇಳಿದರು.ಗೋಕರ್ಣ ಪಂ.ಉಪಾಧ್ಯಕ್ಷೆ ಶ್ರೀಮತಿ ಭಾರತೀ ದೇವತೆ ಮಾತನಾಡಿ ಗೋಕರ್ಣದ ಸರ್ವಾಂಗೀಣ ಅಭಿವೃದ್ಧಿಗೆ ಮಹಾಸಂಕಲ್ಪಮಾಡಿದ ಪೂಜ್ಯ ಶ್ರೀಗಳ ಪ್ರಯತ್ನಕ್ಕೆ ಕ್ಷೇತ್ರಾಧೀಶನ ಅನುಗ್ರಹವನ್ನು ಕೋರಿದರು.ಖ್ಯಾತ ಹಾಲಿವುಡ್ ಚಲನಚಿತ್ರ ನಿರ್ದೇಶಕ ಶ್ರೀ ವಿಲಿಯಂ ಸಹ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶ್ರೀಯುತ ಎಂ.ಕೆ.ಹೆಗಡೆ ದಂಪತಿಗಳು ಸಭಾಪೂಜೆ ನಿರ್ವಹಿಸಿದರು.ಡಾ.ಶ್ರೀಮತಿ ಶಾರದಾ ಜಯಗೋವಿಂದ ಅತಿಥಿಗಳನ್ನು ಪರಿಚಯಿಸಿ ಅವರ ಅನಿಸಿಕೆಗಳನ್ನು ಅನುವಾದಿಸಿದರು.ಸಭೆಯ ನಂತರ ಯಕ್ಷಗಾನ ಕಲಾಕೇಂದ್ರ ಉಡುಪಿ ಇವರಿಂದ “ಜಾಂಬವತಿ ಕಲ್ಯಾಣ” ಎಂಬ ಯಕ್ಷಗಾನ ಪ್ರದರ್ಶನಗೊಂಡಿತು.
Leave a Reply