ಪರಶಿವನು ಆತ್ಮಲಿಂಗರೂಪಿಯಾಗಿ ನೆಲೆನಿಂತ ಪ್ರಾಚೀನ ಪುಣ್ಯತಮ ಕ್ಷೇತ್ರ ಗೋಕರ್ಣ. ಲೋಕಪೀಡಕನಾದ ರಾವಣನ ಭುಜಬಲ ಗರ್ವಾಪಹರಣ ಮಾಡಿದ ಸರ್ವಲೋಕ ಶುಭಂಕರನಾದ ಶಂಕರನ ಆವಾಸಭೂಮಿಯಾದ ಇದು ಶಿವ ಕುಟುಂಬದ ಸನ್ನಿಧಿಯೂ ಹೌದು. ದಕ್ಷಿಣದಿಂದ ಉತ್ತರದೆಡೆಗೆ ಜ್ಞಾನಗಂಗಾ ಪ್ರವಾಹವನ್ನು ಹರಿಸಿದ ಶ್ರೀಮದಾಚಾರ್ಯ ಶಂಕರ ಭಗವತ್ಪಾದರು ಪಾವನಕರ ಪರಂಪರೆಯ ರಾಜಗುರು ಪೀಠವಾದ ಶ್ರೀ ರಾಮಚಂದ್ರಾಪುರ ಮಠವನ್ನು ಸ್ಥಾಪಿಸಿದ್ದು ಕೂಡ ಶ್ರೀ ಕ್ಷೇತ್ರದಲ್ಲಿಯೇ .
ಸಮಸ್ತ ಭಕ್ತರ ಆಪ್ತ ಸ್ಪರ್ಶ-ಅರ್ಚನೆಗಳಿಗೆ ನಿಲುಕುವ, ನಂಬಿದ ಭಕ್ತರನ್ನು ಕಡೆಗಣ್ಣ ನೋಟದಿಂದಲೇ ಕಾಯುವ ಈ ಜಗದೊಡೆಯನ ಆರಾಧನಾ ಪರ್ವ ‘ಮಹಾಶಿವರಾತ್ರಿ’. ಬದುಕಿನ ಎಲ್ಲ ಕತ್ತಲೆಗಳಿಗೆ ಮಂಗಳ ಹಾಡಿ ಸೌಭಾಗ್ಯದ ಶುಭೋದಯವನ್ನುಂಟುಮಾಡುವ ನಿಜವಾದ ಶಿವ-ರಾತ್ರಿಯ ಈ ಪವಿತ್ರ ಸಮಯವು ಶ್ರೀ ಕ್ಷೇತ್ರ ಗೋಕರ್ಣದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಲ್ಪಡುತ್ತದೆ .
ಜೀವನೋತ್ಕರ್ಷಕ್ಕೆ ಕಾರಣವಾದ ಈ ಮಹೋತ್ಸವವು ಗೋಕರ್ಣ ಮಂಡಲಾಧೀಶ್ವರ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ನೇತೃತ್ವ ಹಾಗು ಸಾನ್ನಿಧ್ಯದಲ್ಲಿ ಜರುಗುತ್ತದೆ . ಈ ಸಂದರ್ಭದಲ್ಲಿ ವಿವಿಧ ಅರ್ಚನೆ, ರುದ್ರ ಜಪಾದಿ ಧಾರ್ಮಿಕ ಸೇವಾ ಪ್ರಕಲ್ಪಗಳು ಸಂಪನ್ನಗೊಳ್ಳುವವು. ದೈನಂದಿನ ವಿವಿಧ ಉತ್ಸವಗಳು , ಮಹಾರಥೋತ್ಸವ , ಮಹಾಪೂಜೆ , ಭೂತಬಲಿ , ನಿರಂತರ ಅನ್ನದಾನ ರೂಪದ ‘ಅಮೃತಾನ್ನ’ ಪ್ರಸಾದ ಭೋಜನಾದಿಗಳು , ಒಂಬತ್ತು ಕಾಲ ನಾಡಿನ ವಿವಿಧ ಕಲಾವಿದರಿಂದ, ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ .







