

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ತ್ರಿಲೋಕಬಾಧಕನಾಗಿದ್ದ ರಾವಣನು ಈ ಪ್ರಾಣಲಿಂಗದ ಪ್ರಭಾವನ್ನು ತಿಳಿದು ಶಿವನಿಂದ ಈ ಪ್ರಾಣಲಿಂಗವನ್ನು ಪಡೆಯಲು ತಪಸ್ಸನ್ನಾಚರಿಸಿ, ಈಶ್ವರನನ್ನು ಮೆಚ್ಚಿಸಿ ಲಿಂಗವನ್ನು ಪಡೆದ. ಜೊತೆಗೆ ಈಶ್ವರನಿಂದ ಈ ಲಿಂಗನ್ನು ಎಂದೂ ಭೂಮಿಯಮೇಲೆ ಇಡತಕ್ಕದ್ದಲ್ಲ ಎಂಬ ಎಚ್ಚರಿಕೆಯನ್ನೂ ಪಡೆದಿದ್ದ. ದೇವರ್ಷಿಪೀಡಕನಾಗಿ ಲೋಕಕಂಟಕನಾದ ರಾವಣನು ಈ ಲಿಂಗವನ್ನು ಪಡೆದರೆ ಆಗಬಹುದಾದ ವಿಪತ್ತನ್ನು ಅರಿತ ದೇವತೆಗಳು ವಿಷ್ಣುವನ್ನು ಕಂಡು ತಮ್ಮ ಭಯವನ್ನು ನಿವೇದಿಸಿದರು.ಹಾಗೂ ಆತನ ಸೂಚನೆಯಂತೆ ನಡೆದ ದೇವಕಾರ್ಯದಲ್ಲಿ ವಟುರೂಪಿಯಾದ ಗಣಪತಿಯೂ ಪಶ್ಚಿಮಸಮುದ್ರತೀರದಲ್ಲಿ ರಾವಣನೆದುರಾದ. ವಿಷ್ಣುಮಾಯೆಯಿಂದ ಸಂಧ್ಯಾಸಮಯವಾಗಲು, ನಿತ್ಯಕರ್ಮತತ್ಪರನಾದ ರಾವಣನು, ತಾನು ಸಂಧ್ಯಾಕಾರ್ಯ ಮುಗಿಸಿ ಬರುವವರೆಗೆ ಪ್ರಾಣಲಿಂಗವನ್ನು ಕೈಯಲ್ಲಿ ಹಿಡಿದಿರುವಂತೆವಟುರೂಪಿಯಾದ ಗಣಪತಿಯನ್ನು ಪ್ರಾರ್ಥಿಸಿದ. ಸಮ್ಮತಿಸಿದ ಗಣಪತಿ ತಾನು ಮೂರುಬಾರಿ ರಾವಣನನ್ನು ಕರೆಯುವುದಾಗಿಯೂ , ಅಷ್ಟರೊಳಗೆ ರಾವಣನು ಬರದಿದ್ದಲ್ಲಿ ಲಿಂಗವನ್ನು ಭೂಮಿಯಲ್ಲಿಟ್ಟು ಬರುವುದಾಗಿ ತಿಳಿಸಿದ. ಸಂಧ್ಯಾಕಾರ್ಯದಲ್ಲಿದ್ದ ರಾವಣನನ್ನು ಮೂರುಬಾರಿ ಕರೆದು, ಅವನು ಬರದಿದ್ದಾಗ ಗಣಪತಿಯು ಪರಶಿವನ ಆತ್ಮಲಿಂಗವನ್ನು ಭೂಮಿಯಲ್ಲಿಟ್ಟ. ಕ್ರುದ್ಧನಾದ ರಾವಣ ಲಿಂಗವನ್ನು ಶ್ರಮಪಟ್ಟು ಕೀಳಲು ಯತ್ನಿಸಿದರೂ ಲಿಂಗವು ಕದಲದೆ ಅಲ್ಲಿಯೇ ಸುಸ್ಥಿರವಾಯಿತು. ಹೀಗೆ ಲಿಂಗವು ತನ್ನ ಬಲದಿಂದಲೇ ರಾವಣನಂತಹ ತ್ರಿಲೋಕದಲ್ಲಣನನ್ನು ಗೆದ್ದ ಕಾರಣದಿಂದಾಗಿ ಮಹಾಬಲ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು.