

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಶಿವ-ಗಂಗಾ ವಿವಾಹ ನಿಶ್ಚಿತಾರ್ಥ :
ಪೌರಾಣಿಕ ಕಥೆಯ ಹಿನ್ನೆಲೆಯಲ್ಲಿ ಕದಿರು ಹರಣೋತ್ಸವದ ಸಂದರ್ಭ ಶಿವನು ಗಂಗೆಯ ಸುಂದರ ರೂಪಕ್ಕೆ ಮಾರು ಹೋಗಿರುತ್ತಾನೆ. ಆದರೆ ಶಿವನಿಗೆ ಪಾರ್ವತಿಯೊಂದಿಗೆ ವಿವಾಹವಾಗಿರುವುದರಿಂದ ಪಾರ್ವತಿಗೆ ತಿಳಿಯದಂತೆ ಮಾರುವೇಷದಲ್ಲಿ ಗಂಗೆಯನ್ನು ವರಿಸಲು, ವಿವಾಹ ನಿಶ್ಚಿತಾರ್ಥ ನೆರವೇರಿಸಲು ಗಂಗೆಯ ಹತ್ತಿರ ಬರುತ್ತಾನೆ. ಹಾಗಾಗಿ ಉತ್ಸವ ಕೂಡಾ ರಾತ್ರಿ ಮಹಾಬಲೇಶ್ವರ ದೇವಾಲಯದಲ್ಲಿ ನಿತ್ಯವಿಧಿಯಂತೆ, ಮಹಾಪೂಜೆ ಬಲಿ, ಮುಂತಾದ ವಿಧಿ-ವಿಧಾನಗಳನ್ನು ಪೂರೈಸಿ, ರಾತ್ರಿ 12 ಗಂಟೆ ಸುಮಾರಿಗೆ ಗೋಕರ್ಣದಿಂದ ಉತ್ಸವವು ತೆರಳುತ್ತದೆ.
ಗಂಗಾವಳಿ ನದಿ ಸಮುದ್ರವನ್ನು ಸೇರುವ ಗಂಗೆಕೊಳ್ಳದ ಸಂಗಮ ಪ್ರದೇಶದಲ್ಲಿ ಸ್ನಾನ ಮಾಡಿ, ಗಂಗಾವಳಿಯ ಗಂಗಾಮಾತಾ ದೇವಾಲಯಕ್ಕೆ ತೆರಳುತ್ತದೆ. ಅಲ್ಲಿ ಈ ಸಮಯ ಗಂಗೆ ಉದ್ಭವ ಆಗುವುದು ವಿಶೇಷ . ಅಲ್ಲಿ ಪುರಾಣೋಕ್ತ ವಿಧಿಯಂತೆ ಗಂಗೆಯು ತನ್ನ ಮನೆಯ ಬಾಗಿಲನ್ನು ಮುಚ್ಚಿರುವ ಸಮಯದಲ್ಲಿ ಶಿವನು ಬಾಗಿಲು ತೆರೆಯಲು ಎಷ್ಟೇ ಕೇಳಿಕೊಂಡರೂ ಪರಪುರುಷರ ಧ್ವನಿಗೆ ಗಂಗಾಮಾತೆಯು ಬಾಗಿಲು ತೆರೆಯುವುದಿಲ್ಲ. ಎಷ್ಟೋ ಪರಿಪರಿಯಾಗಿ ಕೇಳಿಕೊಂಡರೂ ಬಾಗಿಲು ತೆರೆಯದ ಗಂಗಾಮಾತೆಶಿವನು ತಾನೆಂದ ಮೇಲೆ ಬಾಗಿಲ ತೆರೆಯುತ್ತಾಳೆ. ಅಲ್ಲಿ ವಿವಾಹದ ನಿಶ್ಚಿತಾರ್ಥದ ವಿಧಿ-ವಿಧಾನಗಳು ವಧು-ವರರ ಎರಡೂ ಪಂಗಡಗಳ ನಡುವೆ ವಿಚಾರ ವಿನಿಮಯಗಳು ಮಂತ್ರ ರೂಪವಾಗಿ, ಸಂವಾದಿಸಲ್ಪಟ್ಟಿತು . ವೇ ಸಾಂಬ ಭಟ್ ಷಡಕ್ಷರಿ ಪೂಜೆ ಕೈಂಕರ್ಯ ನೆರವೇರಿಸಿದರು . ವೇ ಶ್ರೀಧರ ಅಡಿ ಇವರು ಸಂವಾದದಲ್ಲಿ ಭಾಗವಹಿಸಿದ್ದರು .
ವಿವಾಹವನ್ನು 29-10-2016 ಶನಿವಾರ ( ಆಶ್ವಿಜ- ಕೃಷ್ಣ- ಚತುರ್ದಶಿಯಂದು )ಸಂಜೆ 7ರ ಸುಮಾರಿಗೆ ಗೋಧೂಳಿ ಮುಹೂರ್ತದಲ್ಲಿ , ಗಂಗಾವಳಿಯ ವೈವಾಹಿಕ ಪರ್ವತದ ಅಡಿಯಲ್ಲಿ ನಡೆಸುವುದಾಗಿ, ನಿಶ್ಚಯಿಸಲ್ಪಟ್ಟಿತು .