Donate

Help us to help others, please Donate

Related Links

e-Procurement Process 2015

Tender Application Form

Related Links

ನಮ್ಮ ಬಗ್ಗೆ

’ಗೋಕರ್ಣ’ ಭಾರತೀಯರೆಲ್ಲರಿಗೆ ಅತ್ಯಂತ ಪವಿತ್ರವಾದ ತ್ರಿಸ್ಥಳಗಳಲ್ಲಿ ಒಂದು. ಅಂತೆಯೇ ಭರತಖಂಡದ ಹತ್ತು ಭಾಸ್ಕರ ಕ್ಷೇತ್ರಗಳಲ್ಲಿಯೂ ಒಂದು. ಜಗದಾಧಾರನಾದ ಪರಶಿವನು ಇಲ್ಲಿ ಆತ್ಮಲಿಂಗರೂಪಿಯಾಗಿ ನೆಲೆಸಿದ್ದಾನೆ. ಭೋರ್ಗರೆವ ಪಶ್ಚಿಮ ಸಮುದ್ರದ ತಡಿಯಲ್ಲಿ ಸಾಗರಾಭಿಮುಖನಾಗಿ ಸ್ಥಾಪಿತನಾದ ಈ ಕೃಪಾಸಾಗರ ಸಾರ್ವಭೌಮ ಮಹಾಬಲನೆಂದೇ ಖ್ಯಾತ. ತ್ರಿಲೋಕವಿಜಯಿಯಾದ ರಾವಣನ ಬಲವನ್ನು ಅಪಹರಿಸಿ ಅಸುರೀಶಕ್ತಿಯನ್ನು ಮೆಟ್ಟಿನಿಂತ ಈ ಕ್ಷೇತ್ರ ಶಿವಶಕ್ತಿಯು ಅತ್ಯಂತ ಜಾಗೃತ ಸ್ಥಿತಿಯಲ್ಲಿರುವ ವಿರಳಸ್ಥಳಗಳಲ್ಲಿ ಒಂದು. ಜಾತಿ – ಮತಗಳ ಭೆದವಿಲ್ಲದೆ ಎಲ್ಲ ಭಾವುಕಭಕ್ತರಿಗೆ ಶುಭಂಕರನಾದ ಶಿವನನ್ನು ಸ್ಪರ್ಶಿಸಿ ಅರ್ಚಿಸಲು ಅವಕಾಶವಿರುವ ದಕ್ಷಿಣಕಾಶಿ.
ಗೌರಿ, ಗಣಪತಿ, ನಂದಿ, ವೀರಭದ್ರರ ಜೊತೆ ಶಿವನಿದ್ದಾನೆ ಎಂದೇ ಇದು ಸಕಲ ದೇವತೆಗಳ ಆವಾಸಭೂಮಿ. ಲೋಕಪಾವನೆಯಾದ ಗಂಗೆ ಇಲ್ಲಿ ಕೋಟಿತೀರ್ಥರೂಪದಲ್ಲಿದ್ದು ಜನರ ಪಪವನ್ನು ತೊಳೆಯುತ್ತಿದ್ದಾಳೆ ; ಭವತಾಪವನ್ನು ನೀಗುತ್ತಿದ್ದಾಳೆ. ಈ ಪಾವನತರಂಗಿಣಿಯು ಭುವಿಗಿಳಿಯಲು ಕಾರಣನಾದ ಭಗೀರಥನ ಪೋಭೂಮಿಯೂ ಇದೇ ಪ್ರದೇಶ. ಅಗಸ್ತ್ಯರೇ ಮೊದಲಾದ ಸಿದ್ಧಪ್ರಸಿದ್ಧರಾದ ಮಹರ್ಷಿಗಳು ಇಲ್ಲಿ ತಪಸ್ಸನ್ನಾಚರಿಸಿ ಸಿದ್ಧಿಯನ್ನು ಗಳಿಸಿದ್ದಾಳೆ.
ರಾಮಾಯಣ, ಮಹಾಭಾರತ, ಸ್ಕಾಂದ, ಶಿವ, ಭಾಗವತಾದಿ ಪುರಾಣಗಳಲ್ಲಿ ವಿಸ್ತೃತವಾಗಿ ಉಲ್ಲೇಖಿತವಾದ ಈ ಕ್ಷೇತ್ರವನ್ನು ಶ್ರೀಹರ್ಷನೇ ಮೊದಲಾದ ಸಂಸ್ಕೃತ ಕವಿಗಳು ತಮ್ಮ ಕೃತಿಗಳಲ್ಲಿ ಪ್ರಸ್ತಾವಿಸಿದ್ದಾರೆ. ರಾಮಭಕ್ತಾಗ್ರೇಸರನಾದ ಆಂಜನೇಯನಿಗೆ ಜನ್ಮ ನೀಡಿದ ಈ ಸ್ಥಳಸರ್ವಲೋಕ ಹಿತಂಕರ ಶಾಂಕರಪೀಠವಾದ ಅವಿಚ್ಛಿನ್ನಗುರುಪರಂಪರೆಯ ಶ್ರೀರಾಮಚಂದ್ರಾಪುರಮಠದ ಸ್ಥಾಪನೆಗೂ ಕಾರಣವಾಗಿದೆ.
ಆಧುನಿಕ ಕಾಲದಲ್ಲಿಯೂ ಮಂತ್ರದರ್ಶನ ಸಾಧ್ಯ ಎಂಬುದನ್ನು ನಿರೂಪಿಸಿದ ಮಂತ್ರದ್ರಷ್ಟಾರ ಬ್ರಹ್ಮರ್ಷಿ ದೈವದಾತರ ಜನ್ಮಭೂಮಿ ಕಾವ್ಯಕಂಠ ವಾಸಿಷ್ಠ ಗಣಪತಿ ಮುನಿಗಳ
ತಪಃಕ್ಷೇತ್ರ. ಖ್ಯಾತ ವಿಚಾರವಾದಿ, ಚಿಂತಕ, ಸಾಹಿತಿ ದಿ|| ಗೌರೀಶ ಕಾಯ್ಕಿಣಿ, ಡಾ|| ಯಶವಂತ ಚಿತ್ತಾಲ ಮೊದಲಾದ ಮಹನೀಯರ ಜನ್ಮ – ಕರ್ಮಗಳಿಂದ ಸಂಪದ್ಭರಿತವಾದ ಪವಿತ್ರ ಪುಣ್ಯಕ್ಷೇತ್ರ ಆದಿಗೋಕರ್ಣ.
ಪಾತಾಳದಲ್ಲಿ ತಪಸ್ಸನ್ನಾಚರಿಸುತ್ತಿದ್ದ ಪರಮೇಶ್ವರನು ಭೂಮಿಯ ಕಿವಿಯಿಂದ
(ಗೋ=ಭೂಮಿ, ಕರ್ಣ=ಕಿವಿ) ಮೇಲೆ ಬಂದುದರಿಂದ ಈ ಪ್ರದೇಶಕ್ಕೆ ಗೋಕರ್ಣ ಎಂದು ಹೆಸರು. ಅಂತೆಯೇ ರುದ್ರನ ಉತ್ಥಾನಕ್ಕೆ ಕಾರಣವಾದ್ದರಿಂದ ಇದು ರುದ್ರಯೋನಿಯೂ ಹೌದು. ಈಶ್ವರನು ಪಾತಾಳದಿಂದ ಮೇಲೆದ್ದು ಬಂದ ಸ್ಥಳದಲ್ಲಿ ಸ್ಥಾಪಿತವಾದ ಲಿಂಗವೇ ಆದಿಗೋಕರ್ಣ. ಐದು ರಹದಾರಿ ವಿಸ್ತೀರ್ಣದಲ್ಲಿ ಕ್ಷೇತ್ರವೆಂದೂ, ಹನ್ನೆರಡು ಯೋಜನ ಪ್ರದೇಶದಲ್ಲಿ ಮಂಡಲವೆಂದೂ ಪ್ರಸಿದ್ಧವಾದ ಈ ಪ್ರದೇಶ ಗೋಕರ್ಣ ಮಂಡಲವೆಂದೇ ಪ್ರಖ್ಯಾತಿ ಹೊಂದಿದೆ.
ಆತ್ಮಲಿಂಗ ಪರಶಿವನ ಪ್ರಾಣಲಿಂಗ. ಇದು ರುದ್ರಸತ್ವವನ್ನು ಹೊಂದಿದ್ದು ಮೃಗಶೃಂಗ ರೂಪದಲ್ಲಿದೆ. ಇದು ಹಿಂದೆ ದೇವಾಸುರ ಸಂಗ್ರಾಮದಲ್ಲಿ ದೇವತೆಗಳಿಗೆ ತ್ರಾಣನೀಡಿ ಅಸುರ ನಿಗ್ರಹಕ್ಕೆ ಕಾರಣವಾಯಿತು. ತ್ರಿಲೋಕಬಾಧಕನಾಗಿದ್ದ ರಾವಣನು ಈ ಪ್ರಾಣಲಿಂಗದ ಪ್ರಭಾವನ್ನು ತಿಳಿದು ಶಿವನಿಂದ ಈ ಪ್ರಾಣಲಿಂಗವನ್ನು ಪಡೆಯಲು ತಪಸ್ಸನ್ನಾಚರಿಸಿ, ಈಶ್ವರನನ್ನು ಮೆಚ್ಚಿಸಿ ಲಿಂಗವನ್ನು ಪಡೆದ. ಜೊತೆಗೆ ಈಶ್ವರನಿಂದ ಈ ಲಿಂಗನ್ನು ಎಂದೂ ಭೂಮಿಯಮೇಲೆ ಇಡತಕ್ಕದ್ದಲ್ಲ ಎಂಬ ಎಚ್ಚರಿಕೆಯನ್ನೂ ಪಡೆದಿದ್ದ. ದೇವರ್ಷಿಪೀಡಕನಾಗಿ ಲೋಕಕಂಟಕನಾದ ರಾವಣನು ಈ ಲಿಂಗವನ್ನು ಪಡೆದರೆ ಆಗಬಹುದಾದ ವಿಪತ್ತನ್ನು ಅರಿತ ದೇವತೆಗಳು ವಿಷ್ಣುವನ್ನು ಕಂಡು ತಮ್ಮ ಭಯವನ್ನು ನಿವೇದಿಸಿದರು.ಹಾಗೂ ಆತನ ಸೂಚನೆಯಂತೆ ನಡೆದ ದೇವಕಾರ್ಯದಲ್ಲಿ ವಟುರೂಪಿಯಾದ ಗಣಪತಿಯೂ ಪಶ್ಚಿಮಸಮುದ್ರತೀರದಲ್ಲಿ ರಾವಣನೆದುರಾದ. ವಿಷ್ಣುಮಾಯೆಯಿಂದ ಸಂಧ್ಯಾಸಮಯವಾಗಲು, ನಿತ್ಯಕರ್ಮತತ್ಪರನಾದ ರಾವಣನು, ತಾನು ಸಂಧ್ಯಾಕಾರ್ಯ ಮುಗಿಸಿ ಬರುವವರೆಗೆ ಪ್ರಾಣಲಿಂಗವನ್ನು ಕೈಯಲ್ಲಿ ಹಿಡಿದಿರುವಂತೆವಟುರೂಪಿಯಾದ ಗಣಪತಿಯನ್ನು ಪ್ರಾರ್ಥಿಸಿದ. ಸಮ್ಮತಿಸಿದ ಗಣಪತಿ ತಾನು ಮೂರುಬಾರಿ ರಾವಣನನ್ನು ಕರೆಯುವುದಾಗಿಯೂ , ಅಷ್ಟರೊಳಗೆ ರಾವಣನು ಬರದಿದ್ದಲ್ಲಿ ಲಿಂಗವನ್ನು ಭೂಮಿಯಲ್ಲಿಟ್ಟು ಬರುವುದಾಗಿ ತಿಳಿಸಿದ. ಸಂಧ್ಯಾಕಾರ್ಯದಲ್ಲಿದ್ದ ರಾವಣನನ್ನು ಮೂರುಬಾರಿ ಕರೆದು, ಅವನು ಬರದಿದ್ದಾಗ ಗಣಪತಿಯು ಪರಶಿವನ ಆತ್ಮಲಿಂಗವನ್ನು ಭೂಮಿಯಲ್ಲಿಟ್ಟ. ಕ್ರುದ್ಧನಾದ ರಾವಣ ಲಿಂಗವನ್ನು ಶ್ರಮಪಟ್ಟು ಕೀಳಲು ಯತ್ನಿಸಿದರೂ ಲಿಂಗವು ಕದಲದೆ ಅಲ್ಲಿಯೇ ಸುಸ್ಥಿರವಾಯಿತು. ಹೀಗೆ ಲಿಂಗವು ತನ್ನ ಬಲದಿಂದಲೇ ರಾವಣನಂತಹ ತ್ರಿಲೋಕದಲ್ಲಣನನ್ನು ಗೆದ್ದ ಕಾರಣದಿಂದಾಗಿ ಮಹಾಬಲ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು.
ಇಪ್ಪತ್ಮೂರನೆಯ ತ್ರೇತಾಯುಗದ ಈಶ್ವರ ಸಂವತ್ಸರದ ಶರದೃತುವಿನ ಕಾರ್ತಿಕಮಾಸ ಶುಕ್ಲ ಪ್ರತಿಪತ್ ರವಿವಾರ, ತುಲಾಮಾಸದ ವಿಶಾಖಾನಕ್ಷತ್ರ ಮೀನಲಗ್ನದಲ್ಲಿ ಈ ಆತ್ಮಲಿಂಗವು ಪ್ರತಿಷ್ಠಾಪಿತವಾಗಿದೆಯೆಂದು ಪ್ರತೀತಿ.
ಶತಶೃಂಗ ಪರ್ವತೋಪಾಂತದಲ್ಲಿರುವ ಈ ಕ್ಷೇತ್ರ ಕಮಂಡಲುತೀರ್ಥ, ಸೂರ್ಯತೀರ್ಥ, ಗಾಯತ್ರಿ, ಸಾವಿತ್ರಿ, ಸರಸ್ವತೀ ಮೊದಲಾದ ನೂರಾರು ತೀರ್ಥಗಳ ಸಮುಚ್ಚಯ. ಎಲ್ಲ ಗೋವುಗಳ ತಾಯಿಯಾದ ಸುರಭಿಯಿಂದ ಪ್ರತಿಷ್ಠಾಪಿತವಾದ ಲಿಂಗವು ಸಾಗರಸಂಗಮ ಪ್ರದೇಶದಲ್ಲಿದ್ದು, ’ವಿಧೂತಪಾಪಸ್ಥಾಲೀ’ ಎಂಬ ಹೆಸರನ್ನು ಹೊಂದಿದೆ. ಈಗ ’ಪಿತೃಸ್ಥಾಲೀ’ ಎಂದು ಕರೆಯಲ್ಪಡುವ ಈ ಸ್ಥಳಕ್ಕೆ ’ಪಿತೃಮೋಕ್ಷಸ್ಥಳ’ ಎಂಬ ಅಭಿಧಾನವಿದ್ದು, ಪ್ರೇತೋದ್ಧಾರವೇ ಮೊದಲಾದ ಹಲವು ಪಿತೃಕಾರ್ಯಗಳು ಇಲ್ಲಿ ನಡೆಯುತ್ತವೆ.
ನಾಗಗಳಿಂದ ಸ್ಥಾಪಿತನಾದ ನಾಗೇಶ್ವರ, ಗೋಕರ್ಣಕ್ಷೇತ್ರರಕ್ಷಕನಾದ ಬಟ್ಟೆ ವಿನಾಯಕ, ಕ್ಷೇತ್ರಪಾಲಕನಾದ ಶ್ರೀವೀರಭದ್ರ, ಕಾಲಭೈರವರ ದೇವಾಲಯಗಳೂ, ಕಪಿಲಾ ಹಾಗೂ ಖಡ್ಗತೀರ್ಥಗಳು ಮತ್ತು ದಕ್ಷಿಣದ ಗಯಾ ಎಂದು ಪ್ರಸಿದ್ಧವಾದ ಪಿತೃಮೋಕ್ಷಕಾರಕವಾದ ರುದ್ರಪಾದ ಕ್ಷೇತ್ರವೂ ಗೋಕರ್ಣದ ಪರಿಸರದಲ್ಲಿದೆ. ಶ್ರೀದೇವಿಯ ಹದಿನೆಂಟು ಪೀಠಗಳಲ್ಲಿ ಒಂದಾದ ಭದ್ರಕರ್ಣಿಕಾ ಪೀಠವೂ ಇಲ್ಲಿದ್ದು, ದೇವಿಯು ಭದ್ರಕಾಳಿ ಎಂಬ ಹೆಸರಿನಿಂದ ಕ್ಷೇತ್ರರಕ್ಷಕಳಾಗಿ ದಕ್ಷಿಣಾಭಿಮುಖವಾಗಿ ನಿಂತಿದ್ದಾಳೆ. ಸುಬ್ರಹ್ಮಣ್ಯ, ಮಾರ್ಕಂಡೇಶ್ವರ, ವೇಂಕಟೇಶ್ವರ, ಸಿದ್ಧೇಶ್ವರ, ಮಾಣೇಶ್ವರ, ಭೂತನಾಥ, ಕೇತಕೀವಿನಾಯಕ, ಶ್ರೀಕೃಷ್ಣ, ನೃಸಿಂಹ ದೇವಾಲಯಗಳೂ ಅಶೋಕ, ಚಕ್ರತೀರ್ಥ, ರಾಮತೀರ್ಥ ಮೊದಲಾದ ತೀರ್ಥಗಳೂ ಶ್ರೀಕ್ಷೇತ್ರದಲ್ಲಿದ್ದು, ಈ ಸ್ಥಾನಗಳ ವೈಶಿಷ್ಟ್ಯವು ಪುರಾಣದಲ್ಲಿ ಪ್ರತಿಪಾದಿತವಾಗಿದೆ.

ದಿನಚರಿ :-

Highslide for Wordpress Plugin