

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವರ ಅನುಗ್ರಹ ರೂಪದಲ್ಲಿ ಶ್ರೀ ಕ್ಷೇತ್ರ ಗೋಕರ್ಣ ಹಾಗೂ ಸುತ್ತಮುತ್ತಲಿನ ಊರುಗಳಿಗೆ ಉಚಿತವಾಗಿ ನೀರು ವಿತರಿಸುವ ಕಾರ್ಯಕ್ರಮಕ್ಕೆ ಯುಗಾದಿ ಹಬ್ಬದ ಶುಭ ದಿನವಾದ ಇಂದು ಚಾಲನೆ ನೀಡಲಾಯಿತು . ಈ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವೇ . ಶಿವರಾಮ ಮಯ್ಯರ್ ಗೋಕರ್ಣ ಮತ್ತು ಶ್ರೀ ಮಂಗಲಮೂರ್ತಿ ಸಭಾಹಿತ - ವಕೀಲರು - ಗೋಕರ್ಣ ಇವರುಗಳು ವಹಿಸಿಕೊಂಡಿರುತ್ತಾರೆ . ಹಿಂದುಳಿದ ಜನಾಂಗದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಗೋಕರ್ಣದ ಸಮೀಪದ ಕಡಿಮೆ ಗ್ರಾಮದಲ್ಲಿ ನೀರು ವಿತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು . ಈ ಸಂದರ್ಭದಲ್ಲಿ ವೇ. ಶಿವರಾಮ ಮಯ್ಯರ್ , ಶ್ರೀ ಮಂಗಲಮೂರ್ತಿ ಸಭಾಹಿತ - ವಕೀಲರು - ಗೋಕರ್ಣ, ಶ್ರೀ ಜಿ ಕೆ ಹೆಗಡೆ, ಶ್ರೀ ಲಂಬೋಧರ ಸಭಾಹಿತ , ಶ್ರೀ ಶ್ರೀಧರ್ ಅಡಿ , ಶ್ರೀ ರಮೇಶ ಭಟ್ ಕೂಜಳ್ಳಿ ಹಾಗೂ ಕಡಿಮೆ ಗ್ರಾಮಸ್ಥರು ಉಪಸ್ಥಿತರಿದ್ದರು .
“ನಮಗೆ ಎರಡು ದಿನಕ್ಕೊಮ್ಮೆ ಸ್ವಲ್ಪವೇ ನೀರು ಸಿಗುತ್ತಿತ್ತು . ಈ ಯೋಜನೆಯಿಂದ ತುಂಬಾ ಉಪಕಾರವಾಯಿತು” ಎಂದು ಕಡಿಮೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು .
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಜಿ ಕೆ ಹೆಗಡೆ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಸಮಾಜಮುಖಿ ಚಿಂತನೆಗಳ ಅಂಗವಾಗಿ “ಜೀವ ಜಲ ಉಚಿತ ವಿತರಣಾ ಯೋಜನೆ ” ಪ್ರಾರಂಭವಾಗಿದೆ . ಈ ಸಮಾಜಮುಖಿ ಯೋಜನೆಯ ಸದುಪಯೋಗ ಪಡೆಯಲು ಕೋರಿದರು ಮತ್ತು ಈ ಯೋಜನೆಯ ಪ್ರಾಯೋಜಕರನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೇ. ಶಿವರಾಮ ಮಯ್ಯರ್ ಮತ್ತು ಶ್ರೀ ಮಂಗಲಮೂರ್ತಿ ಸಭಾಹಿತ ಇವರು ಯೋಜನೆಯನ್ನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಗ್ರಾಮಗಳಿಗೆ ವಿಸ್ತರಿಸಲಾಗುವುದು ಎಂದು ತಿಳಿಸಿದರು .